ಥೋಡುಪುಳ: ಕೇರಳದ ಕನಿಷ್ಠ 873ಪೊಲೀಸರ ಅಧಿಕಾರಿಗಳು ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಹಸ್ತಾಂತರಿಸಿದ ವರದಿಯಲ್ಲಿ ತಿಳಿಸಿದೆ. ಸಬ್ ಇನ್ಸ್ಪೆಕ್ಟರ್ (ಎಸ್ಐ) ಮತ್ತು ಸ್ಟೇಷನ್ ಹೆಡ್ ಆಫೀಸರ್ (ಎಸ್ಎಚ್ಒ) ಶ್ರೇಣಿಗಳ ಅಧಿಕಾರಿಗಳು ಮತ್ತು ನಾಗರಿಕ ಪೊಲೀಸ್ ಸಿಬ್ಬಂದಿ ಕೇಂದ್ರ ಏಜೆನ್ಸಿಗಳ ಕಣ್ಗಾವಲಿನಲ್ಲಿದ್ದಾರೆ. ಪೋಲಿಸ್ ಅಧಿಕಾರಿಗಳ ಹಣಕಾಸು ವ್ಯವಹಾರಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎನ್ಐಎ ಪಟ್ಟಿಯಲ್ಲಿ ವಿಶೇಷ ಶಾಖೆ, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳಿಗೆ ಸೇರಿದ ಸಿಬ್ಬಂದಿ ಮತ್ತು ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳ ಕಚೇರಿ ಕೆಲಸಗಳನ್ನು ಮಾಡುತ್ತಿದ್ದವರು ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆಬ್ರವರಿಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಾಯಕರ ವಿವರಗಳನ್ನು ಪಿಎಫ್ಐಗೆ ಸೋರಿಕೆ ಮಾಡಿದ ಆರೋಪದ ಮೇಲೆ ಥೋಡುಪುಳದ ಕರಿಮಣ್ಣೂರ್ ಪೊಲೀಸ್ ಠಾಣೆಗೆ ಸೇರಿದ ಸಿವಿಲ್ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದೇ ರೀತಿಯ ಆರೋಪದ ಮೇಲೆ ಒಬ್ಬ ಎಸ್ ಐ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಮುನ್ನಾರ್ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ.