ಕೆಎನ್ಎನ್ಸಿನಿಮಾಡೆಸ್ಕ್: ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಹೆಜ್ಜೆಯಲ್ಲಿಯೇ ಪ್ಯಾನ್ ಇಂಡಿಯಾ ಮೆರವಣಿಗೆ ಹೊರಡಲು ಅಣಿಯಾಗಿರುವ ಝೈದ್ ಚೊಚ್ಚಲ ಚಿತ್ರದ ಸ್ಯಾಂಪಲ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಹಿಂದೆ ಬಿಡುಗಡೆಯಾದ ಚಿತ್ರದ ಒಂದಷ್ಟು ಝಲಕ್ ನೋಡಿದವರೆಲ್ಲಾ ಇದೊಂದು ಲವ್ ಸ್ಟೋರಿ ಸಿನಿಮಾ ಅಂತಾ ಭಾವಿಸಿದ್ದರು. ಆದರೆ ಟ್ರೇಲರ್ ಹೇಳುತ್ತಿರುವುದು ಬೇರೆಯದ್ದೇ ಕಥೆ. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ಖ್ಯಾತ ನಟ ಅರ್ಬಾಜ್ ಖಾನ್ ಸಮಾಗಮದೊಂದಿಗೆ ಕನ್ನಡ ಪತ್ರಿಕಾ ಮಾಧ್ಯಮದವರು, ಪರಭಾಷಾ ಪತ್ರಿಕಾ ಮಾಧ್ಯಮದರ ಸಮ್ಮುಖದಲ್ಲಿ ಅನಾವರಣಗೊಂಡ ಟ್ರೇಲರ್ ಹಲವು ನಿಗೂಢ ಅಂಶಗಳನ್ನು ಹೊತ್ತು ಬಂದಿದೆ. ಇದು ಬರೀ ಲವ್ ಸ್ಟೋರಿ ಸಿನಿಮಾವಲ್ಲ, ಟೈಮ್ ಟ್ರಾವೆಲ್ಲರ್ ಕಥೆ ಇದೆ. ಪ್ರೇಕ್ಷಕರನ್ನು ಚಕಿತಗೊಳಿಸುವ ಥ್ರಿಲ್ಲರ್ ಕಂಟೆಂಟ್ ಕೂಡ ಸಿನಿಮಾದಲ್ಲಿದೆ ಅನ್ನೋದು ಟ್ರೇಲರ್ ನಲ್ಲಿ ಗೊತ್ತಾಗುತ್ತದೆ.
ಹೇಳಿಕೇಳಿ ಬನಾರಸ್ ಪ್ಯಾನ್ ಇಂಡಿಯಾ ಸಿನಿಮಾ. ಪಂಚ ಭಾಷೆಯಲ್ಲಿ ತೆರೆಗೆ ಬರುತ್ತಿರುವ ಮೆಗಾ ಮೂವೀ. ಹೀಗಾಗಿ ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ನಿರ್ಮಾಪಕ ತಿಲಕ್ ಬಲ್ಲಾಳ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗ್ಗೆ ವಾರದ ಹಿಂದೆ ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿ ಪ್ರತಿ ಫ್ರೇಮ್ ಟು ಫ್ರೇಮ್ ಶ್ರೀಮಂತಿಕೆಯಿಂದ ಕೂಡಿದೆ. ಹೊಸ ಮುಖವಾದರೂ ಝೈದ್ ಪಳಗಿದ ನಾಯಕನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೋನಲ್ ಮೊಂಥೆರೋ, ಅಚ್ಯುತ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಬರ್ಕತ್ ಅಲಿ ಸೇರಿದಂತೆ ಎಲ್ಲರ ಪಾತ್ರಗಳು ಪ್ರೇಕ್ಷಕರ ಗಮನಸೆಳೆಯುತ್ತಿವೆ. ಒಂದು ಫ್ರೆಶ್ ಕಂಟೆಂಟ್ ನ ಬನಾರಸ್ ಟ್ರೇಲರ್ ಚಿತ್ರಪ್ರೇಮಿಗಳು ಭಾರೀ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪಂಚ ಭಾಷೆಯಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಹತ್ತು ಮಿಲಿಯನ್ ವೀವ್ಸ್ ಪಡೆದು ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಡುತ್ತಿದೆ.
ಪ್ರತಿ ಸಿನಿಮಾದಲ್ಲೊಂದು ಹೊಸತನ ಕಥೆ ಉಣಬಡಿಸುವ ನಿರ್ದೇಶಕ ಜಯತೀರ್ಥ ಈ ಚಿತ್ರದಲ್ಲೂ ಫ್ರೆಶ್ ಕಥೆಯ ಮೂಲಕ ಪ್ರೇಕ್ಷಕರನ್ನು ಎಂಟರ್ ಟ್ರೈನ್ ಮಾಡುವ ತವಕದಲ್ಲಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್-ಅರ್ಬಾಜ್ ಖಾನ್ ನಂತಹ ದಿಗ್ಗಜ ಕಲಾವಿದರು ಝೈದ್ ಚೊಚ್ಚಲ ಚಿತ್ರಕ್ಕೆ ಸಾಥ್ ನೀಡಿ, ಝೈದ್ ನಟನೆ ಬಗ್ಗೆ, ಜಯತೀರ್ಥ ನಿರ್ದೇಶನದ ಚಾಕಚಕ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮಯಗಂಗೆ ಹಾಡು ಸೇರಿದಂತೆ ಉಳಿದ ಎರಡು ಹಾಡುಗಳು ಹಿಟ್ ಪಟ್ಟಿ ಸೇರಿದ್ದು, ಸಿನಿಮಾ ತಂಡದ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಶುರು ಮಾಡಿದೆ.
ನವೆಂಬರ್ 4ರಂದು ಬನಾರಸ್ ಸಿನಿಮಾ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈ ಮೂಲಕ ಕನ್ನಡದ ಕೀರ್ತಿಪತಾಕೆ ರಾಷ್ಟ್ರಮಟ್ಟದಲ್ಲಿ ಹಾರುತ್ತಿದೆ. ಬನಾರಸ್ ಮೂಲಕ ಕನ್ನಡ ಚಿತ್ರರಂಗದ ಘನತೆಗೆ ಮತ್ತೊಂದು ಗರಿ ಮೂಡುವುದು ಪಕ್ಕ. ಹಾಗೇಯೇ ಝೈದ್ ಖಾನ್ ಕನ್ನಡ ಚಿತ್ರರಂಗದ ಭರವಸೆ ಹೀರೋ ಆಗಿ ನಿಲ್ಲುವ ಎಲ್ಲಾ ಸೂಚನೆಗಳು ಸಿಕ್ಕಿವೆ. ಬನಾರಸ್ ಮೂಲಕ ಝೈದ್ ಖಾನ್ ಎಂಬ ಅಪ್ಪಟ ಕನ್ನಡಿಗನ, ಪ್ರತಿಭಾವಂತ ಹೀರೋ ಪ್ಯಾನ್ ಇಂಡಿಯಾ ಸಿನಿಮಾ ಲೋಕಕ್ಕೆ ಪರಿಚಿತರಾಗಲಿದ್ದಾರೆ.