ಜಾರ್ಖಂಡ್: ತನ್ನ ಆದೇಶದ ಮೇರೆಗೆ ನೃತ್ಯ ಮಾಡಲು ನಿರಾಕರಿಸಿದ 6ನೇ ತರಗತಿಯ 13 ವಿದ್ಯಾರ್ಥಿಗಳಿಗೆ ಶಿಕ್ಷಕನೊಬ್ಬ ಮರದ ಬೆತ್ತದಿಂದ ತೀವ್ರವಾಗಿ ಥಳಿಸಿದ್ದು, ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್ನ ಗುಮ್ಲಾದಲ್ಲಿ ನಡೆದಿದೆ.
ಏನಿದು ಘಟನೆ?
ಗುಮ್ಲಾದ ಸೈಂಟ್ ಮೈಕೆಲ್ ಶಾಲೆಯ ವಿಕಾಸ್ ಸಿರಿಲ್ ಎಂಬ ಶಿಕ್ಷಕ 6 ನೇ ತರಗತಿಯ ವಿದ್ಯಾರ್ಥಿಗಳಿಗೆ ನೃತ್ಯ ಮಾಡಲು ಹೇಳಿದ್ದು, ಇದನ್ನು ಮಕ್ಕಳು ನಿರಾಕರಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ, ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಥಳಿಸಲು ಶಿಕ್ಷಕರಿಗೆ ಆದೇಶಿಸಿದ್ದು, ಶಿಕ್ಷಕ ಮರದ ಬೆತ್ತ ತೀವ್ರವಾಗಿ ಥಳಿಸಿದ್ದಾನೆ. ನಂತ್ರ ಗಾಯಗೊಂಡ ಎಲ್ಲ ವಿದ್ಯಾರ್ಥಿಗಳನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕರು ಪ್ರಾಣಿಗಳಂತೆ ವರ್ತಿಸುತ್ತಾರೆ: ಪೋಷಕರು
ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ಎದುರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಶಿಕ್ಷಕರು ‘ಪ್ರಾಣಿ’ಗಳಂತೆ ವರ್ತಿಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಘಟನೆಗಳು ವರದಿಯಾಗಿದ್ದವು. ಶಿಕ್ಷಕನ ಹಲ್ಲೆ ನಂತರ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 13 ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿರುವುದಾಗಿ ಸ್ಟೇಷನ್ ಹೌಸ್ ಆಫೀಸರ್ ಅಶುತೋಷ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಏತನ್ಮಧ್ಯೆ, ಪೋಷಕರ ದೂರಿನ ಆಧಾರದ ಮೇಲೆ, ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಶಿಶಿರ್ ಕುಮಾರ್ ಸಿಂಗ್ ಅವರು ತನಿಖೆಗೆ ತಂಡವನ್ನು ರಚಿಸಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಷಕರಿಗೆ ಭರವಸೆ ನೀಡಿದರು.