ಉಗಾಂಡಾ : ಪುಟ್ಟ ರಾಷ್ಟ್ರ ಉಗಾಂಡಾ ದಲ್ಲಿ ದಿನದಿಂದ ದಿನಕ್ಕೆ ಎಬೋಲಾ ಮಹಾಮಾರಿ ಹೆಚ್ಚಾಗುತ್ತಿದೆ. ಎಬೋಲಾ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆಂದು ಖುದ್ದು ಉಗಾಂಡಾ ಅಧ್ಯಕ್ಷರೇ ಹೇಳಿದ್ದಾರೆ.
ಸಂಭವಿಸಿರುವ ಇನ್ನೂ 19 ಸಾವುಗಳಿಗೂ ಎಬೋಲಾ ಸಂಪರ್ಕವಿರಬಹುದೆಂದು ಶಂಕಿಸಲಾಗಿದೆ. ಆದರೆ ಕೋವಿಡ್ಗಿಂತ ಎಬೋಲಾ ನಿರ್ವಹಣೆ ಸುಲಭವಾಗಿರುವುದರಿಂದ ಲಾಕ್ಡೌನ್ಗೆ ಆದೇಶಿಸುವುದಿಲ್ಲ ಎಂದು ಅವರು ಸ್ಪಷ್ಟಡಿಸಿದ್ದಾರೆ.
ಕಳೆದ ವಾರ ಉಗಾಂಡಾದಲ್ಲಿ ಮಾರಣಾಂತಿಕ ಹೆಮರಾಜಿಕ್ ಜ್ವರ ಏಕಾಏಕಿ ಕಾಣಿಸಿಕೊಂಡಿದೆ. 45 ಮಿಲಿಯನ್ ಜನಸಂಖ್ಯೆ ಇರುವ ಈ ರಾಷ್ಟ್ರದಲ್ಲೀಗ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗುವ ಭೀತಿ ಎದುರಾಗಿದೆ. ಎಬೋಲಾ ಕಾಯಿಲೆಗೆ ಯಾವುದೇ ಲಸಿಕೆ ಇಲ್ಲ. ಎಬೋಲಾದಿಂದ ಸಾವು ಸಂಭವಿಸುವ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾದ ಭಾಷಣದಲ್ಲಿ ಅಧ್ಯಕ್ಷ ಯೊವೆರಿ ಮುಸೆವೆನಿ ಮಾಹಿತಿ ನೀಡಿದ್ರು.
ಇನ್ನೂ 19 ಮಂದಿ ಮೃತಪಟ್ಟಿದ್ದು, ಅವರಿಂದ ರಕ್ತದ ಮಾದರಿಗಳನ್ನು ಪಡೆದಿರಲಿಲ್ಲ. ಹಾಗಾಗಿ ಅವರು ಎಬೋಲಾದಿಂದಲೇ ಸತ್ತಿದ್ದಾರೋ ಇಲ್ಲವೋ ಅನ್ನೋದು ದೃಢಪಟ್ಟಿಲ್ಲ. ಇನ್ನೂ 19 ಜನರಲ್ಲಿ ಎಬೋಲಾ ಸೋಂಕು ದೃಢಪಟ್ಟಿದೆ. ಈ ಪೈಕಿ ನಾಲ್ವರು ವೈದ್ಯರು, ಒಬ್ಬ ಅರಿವಳಿಕೆ ತಜ್ಞರು ಮತ್ತು ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಆರು ಆರೋಗ್ಯ ಕಾರ್ಯಕರ್ತರು ಇದ್ದಾರೆ.
ಎಬೋಲಾದಿಂದ ಪಾರಾಗಲು ಕೆಲವೊಂದು ಮುನ್ನೆಚ್ಚರಿಕೆಗಳನ್ನು ವಹಿಸುವಂತೆಯೂ ಉಗಾಂಡಾ ಅಧ್ಯಕ್ಷರು ಕಿವಿಮಾತು ಹೇಳಿದ್ರು. ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ಸ್ಯಾನಿಟೈಜರ್ ಬಳಸಿ. ಯಾವುದೇ ವ್ಯಕ್ತಿಯಿಂದ ದೇಹದ ದ್ರವಗಳ ಸಂಪರ್ಕವನ್ನು ತಪ್ಪಿಸಿ ಅನ್ನೋದು ಅಧ್ಯಕ್ಷರ ಸಲಹೆ. ಎಬೋಲಾ ಮುಖ್ಯವಾಗಿ ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳ ಸಂಪರ್ಕದ ಮೂಲಕ ಹರಡುತ್ತದೆ.
ತೀವ್ರವಾದ ದೌರ್ಬಲ್ಯ, ಸ್ನಾಯು ನೋವು, ತಲೆನೋವು ಮತ್ತು ಗಂಟಲು ನೋವು, ವಾಂತಿ, ಅತಿಸಾರ ಮತ್ತು ದದ್ದುಗಳು ಎಬೋಲಾದ ಪ್ರಮುಖ ಲಕ್ಷಣಗಳು. ಈ ಮಾರಕ ಕಾಯಿಲೆ ನೆರೆಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 2018-2020ರ ಅವಧಿಯಲ್ಲಿ ಸುಮಾರು 2,300 ಜನರನ್ನು ಬಲಿ ಪಡೆದಿದೆ. ರಾಜಧಾನಿ ಕಂಪಾಲಾದಿಂದ ಪಶ್ಚಿಮಕ್ಕೆ 140 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಉಗಾಂಡಾದ ಮುಬೆಂಡೆ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಂತರ ಇನ್ನೂ ಎರಡು ಜಿಲ್ಲೆಗಳಿಗೆ ವ್ಯಾಪಿಸಿದೆ.