ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ‘ಭಾರತ್ ಜೋಡೋ ಯಾತ್ರೆ’ ಎಂಟ್ರಿ ಯಾಗಲಿದೆ.
ಈ ಹಿನ್ನೆಲೆ ಗುಂಡ್ಲುಪೇಟೆಯಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮೂವರು ಎಸ್ ಪಿ, 25 ಸಬ್ ಇನ್ ಸ್ಪೆಕ್ಟರ್, 8 ಡಿವೈಎಸ್ ಪಿ, 1000 ಸಾವಿರ ಕಾನ್ ಸ್ಟೇಬಲ್, 10 ಕ್ಕೂ ಹೆಚ್ಚು ಡಿಆರ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಗುಂಡ್ಲುಪೇಟೆ ಚೆಕ್ ಪೋಸ್ಟ್ ಬಳಿ ಭದ್ರತೆ ನಿಯೋಜಿಸಲಾಗಿದೆ.
‘ಭಾರತ್ ಜೋಡೋ ಯಾತ್ರೆ’ ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ತಮ್ಮ ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾರೆ.
ತಮಿಳುನಾಡಿನ ಗೂಡಲೂರು ಕಡೆಯಿಂದ ರಾಜ್ಯ ಪ್ರವೇಶ. ಬಂಡೀಪುರ ಗಡಿಯಿಂದ ವಾಹನದಲ್ಲಿ ಗುಂಡ್ಲುಪೇಟೆಗೆ ಬೆಳಗ್ಗೆ 9ಕ್ಕೆ ರಾಹುಲ್ ಹಾಗೂ ಅವರ ಸಹವರ್ತಿಗಳ ಆಗಮನವಾಗಲಿದ್ದು, ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರಿನ ಖಾಸಗಿ ಜಾಗದಲ್ಲಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಕನಿಷ್ಠ 25ರಿಂದ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಶನೇಶ್ವರ ದೇವಾಲಯದ ಬಳಿಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಬುಡಕಟ್ಟು ಜನರು ಹಾಗೂ ಚಾಮರಾಝನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ. ಸಂವಾದದ ನಂತರ ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ವೇಳೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಶುಕ್ರವಾರ ಪಾದಯಾತ್ರೆ ಅಂತ್ಯವಾಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.