ಚಿಕ್ಕಮಗಳೂರು: ಜಿಲ್ಲೆಯ ಎಸ್ಡಿಪಿಐ ಕಚೇರಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಿಎಫ್ಐ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದೇ ವೇಳೆ ಚಾಂದ್ ಪಾಷಾ ಪೊಲೀಸರಿಗೆ ನನ್ನ ಮನೆಯನ್ನು ಯಾಕೆ ರೇಡ್ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು ಜಾಸ್ತಿ ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ನಮಗೆ ಆದೇಶ ಇದೆ ನಿಮ್ಮ ಮನೆಯನ್ನ ಸರ್ಚ್ ಮಾಡುತ್ತೇವೆ ಎಂದು ಹೇಳಿದ್ದಾರೆ . ದಾಳಿ ನಡೆಸಿ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ಇನ್ನು ಪಿಎಫ್ಐ ಕಾರ್ಯಕರ್ತ ಆಗಿರುವ ಆರೀಫ್ ಮನೆಗೂ ಡಿಸಿ ಮಾರ್ಗದರ್ಶನ ಮೇರೆಗೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎರಡು ದಿನದ ಹಿಂದೆ ಠಾಣೆಗೆ ಬಂದು ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಠಾಣೆಗೆ ಹಾಜರಾಗದ ಹಿನ್ನೆಲೆ ಜಿಲ್ಲಾಧಿಕಾರಿಯಿಂದ ಸರ್ಚ್ ವಾರೆಂಟ್ ನೀಡಿದ್ದು, ಇಂದು ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.