ನವದೆಹಲಿ : ಈ ವಾರದ ಪರಾಮರ್ಶೆಯ ನಂತ್ರ ನೈಸರ್ಗಿಕ ಅನಿಲ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಮೂಲಗಳು ತಿಳಿಸಿವೆ. ನೈಸರ್ಗಿಕ ಅನಿಲವನ್ನ ವಿದ್ಯುತ್ ಉತ್ಪಾದನೆ, ರಸಗೊಬ್ಬರಗಳು ಮತ್ತು ವಾಹನಗಳಿಗೆ ಸಿಎನ್ಜಿ ಉತ್ಪಾದನೆಗೆ ಬಳಸಲಾಗುತ್ತದೆ. ದೇಶದಲ್ಲಿ ಉತ್ಪಾದನೆಯಾಗುವ ಅನಿಲದ ಬೆಲೆಯನ್ನ ಸರ್ಕಾರ ನಿರ್ಧರಿಸುತ್ತದೆ. ಅಕ್ಟೋಬರ್ 1ರಂದು ಸರ್ಕಾರವು ಮುಂದಿನ ಅನಿಲ ಬೆಲೆಗಳನ್ನ ಪರಿಷ್ಕರಿಸಬೋದು.
ಇತ್ತೀಚಿನ ಇಂಧನ ಬೆಲೆ ಏರಿಕೆಯ ನಂತರ, ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಹಳೆಯ ಕ್ಷೇತ್ರಗಳಿಂದ ಉತ್ಪಾದಿಸಲಾದ ಅನಿಲಕ್ಕೆ ಪಾವತಿಸುವ ದರವು ಪ್ರತಿ ಯೂನಿಟ್’ಗೆ (ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್ಗಳು) 6.1 ಡಾಲರ್ನಿಂದ 9 ಡಾಲರ್ಗೆ ಏರಬಹುದು. ಇದು ನಿಯಂತ್ರಿತ ವಲಯಗಳಿಗೆ ಇದುವರೆಗಿನ ಅತ್ಯಧಿಕ ದರವಾಗಲಿದೆ.
2019ರ ನಂತರ ಮೂರನೇ ಬಾರಿಗೆ ಬೆಲೆ ಏರಿಕೆ.!
ಬೆಂಚ್ ಮಾರ್ಕ್ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ಏರಿಕೆಯ ನಡುವೆ ಏಪ್ರಿಲ್ 2019 ರಿಂದ ನೈಸರ್ಗಿಕ ಅನಿಲ ಬೆಲೆಗಳಲ್ಲಿ ಇದು ಮೂರನೇ ಏರಿಕೆಯಾಗಿದೆ. ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ (ಏಪ್ರಿಲ್ 1 ಮತ್ತು ಅಕ್ಟೋಬರ್ 1) ಅನಿಲ ಬೆಲೆಗಳನ್ನು ನಿಗದಿಪಡಿಸುತ್ತದೆ. ಈ ಬೆಲೆಯನ್ನ ಯುಎಸ್, ಕೆನಡಾ ಮತ್ತು ರಷ್ಯಾದಂತಹ ಅನಿಲ ನಿಕ್ಷೇಪಗಳನ್ನು ಹೊಂದಿರುವ ದೇಶಗಳ ಕಳೆದ ಒಂದು ವರ್ಷದ ದರಗಳ ಆಧಾರದ ಮೇಲೆ ಒಂದು ತ್ರೈಮಾಸಿಕದ ಮಧ್ಯಂತರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಕ್ಟೋಬರ್ 1 ರಿಂದ ಮಾರ್ಚ್ 31, 2023 ರವರೆಗೆ ಅನಿಲದ ಬೆಲೆಯನ್ನು ಜುಲೈ 2021 ರಿಂದ ಜೂನ್ 2022 ರವರೆಗೆ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆ ಸಮಯದಲ್ಲಿ ಅನಿಲ ಬೆಲೆಗಳು ಉನ್ನತ ಮಟ್ಟದಲ್ಲಿದ್ದವು.