ಬೆಂಗಳೂರು : ಡಯಟ್ , ಸಿ.ಟಿ.ಇ ಮತ್ತು ಉಪನಿರ್ದೇಶಕರ ಕಚೇರಿಗಳಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸೂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ ವಿಶಾಲ್ ಈ ಕುರಿತು ಆದೇಶ ಹೊರಡಿಸಿದ್ದು, ಸಹಾಯಕ ಸಾಂಖ್ಯಿಕಅಧಿಕಾರಿ ಹುದ್ದೆಯು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಂಬಂಧಿಸಿದ ಹುದ್ದೆಗಳಾಗಿದ್ದು, ಈ ಹುದ್ದೆಗಳಲ್ಲಿ ತಜ್ಞ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಹುದ್ದೆಗಳಲ್ಲಿ ಬೋಧರ ವೃಂದದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಕರು ಕಾರ್ಯನಿರ್ವಹಿಸುವುದು ಸಮಂಜಸವಲ್ಲ ಆದ್ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸೇವೆಯನ್ನು ಹಿಂಪಡೆದು , ಸದರಿ ಶಿಕ್ಷಕರು 10 ವರ್ಷ ‘ಸಿ’ ವಲಯದಲ್ಲಿ ಸೇವೆ ಸಲ್ಲಿಸದಿದ್ದಲ್ಲಿ ಕಡ್ಡಾಯವಾಗಿ ಸಿ ವಲಯಕ್ಕೆ ನಿಯುಕ್ತಿಗೊಳಿಸುವಂತೆ ಸೂಚನೆ ನೀಡಿದ್ದಾರೆ.