ಬೆಂಗಳೂರು : ನಗರವನ್ನು ಯೋಜನಾ ರಹಿತವಾಗಿ ಬೆಳೆಸಿರುವುದೇ ಬೆಂಗಳೂರಿನಲ್ಲಿ ಉಂಟಾದ ಅತಿವೃಷ್ಟಿಗೆ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. . ಎನ್ಜಿಟಿ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜಕಾಲುವೆಯ ಪಕ್ಕ ಇರುವ ಮನೆಗಳನ್ನು ಪರಿಶೀಲಿಸಿದ್ದು, ರಾಜಕಾಲುವೆ ಕ್ಲಿಯರ್ ಮಾಡಲು ಕೆಲ ಮನೆಗಳ ತೆರವು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಮೂಲ ಬೆಂಗಳೂರು ಸಂಪೂರ್ಣವಾಗಿ ಬದಲಾಗಿದೆ. ಶಿವಾಜಿನಗರ, ಅಲಸೂರು, ಸ್ಯಾಂಕಿ ಭಾಗದಲ್ಲೂ ಮಳೆಯಾಗಿದೆ. ಅದರೆ ಅಲ್ಲಿ ಮಳೆ ನೀರು ಹರಿದುಹೋಗಿರುವುದರಿಂದ ಸಮಸ್ಯೆಯಾಗಿಲ್ಲ. ಬೆಂಗಳೂರು ನಗರದಲ್ಲಿ ಒಳಚರಂಡಿ ನೀರು ಹೆಚ್ಚಾಗುತ್ತಿರುವುದರಿಂದ ಅದನ್ನು ನೇರವಾಗಿ ರಾಜಕಾಲುವೆಗೆ ಬಿಡುವ ಕೆಲಸ ಆಗುತ್ತಿದೆ ಎಂದರು.
ಭೂಕುಸಿತಕ್ಕೆ ಎನ್ಡಿಆರ್ಎಫ್ನಡಿ ಪರಿಹಾರ ಇಲ್ಲ. ಇದನ್ನೂ ಎನ್ಡಿಆರ್ಎಫ್ನಡಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮನೆಗಳಿಗೆ ಹಾನಿಯಾದವರಿಗೆ ತಕ್ಷಣ ಹಣ ನೀಡುವ ಕೆಲಸ ಮಾಡಿದ್ದೇವೆ. ವರದಿ ಬಂದ ಕೂಡಲೇ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.