ಬೆಂಗಳೂರು: ಆರೋಗ್ಯ ಸೇವೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಂತ ರಾಜ್ಯ ಸರ್ಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ( Namma Clinic ) ಆರಂಭಿಸಲಾಗಿತ್ತು. ಈ ನಮ್ಮ ಕ್ಲಿನಿಕ್ ಗಳನ್ನು ರಾಜ್ಯಾಧ್ಯಂತ ವಿಸ್ತರಣೆ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಲಾಗಿದೆ. ಅಕ್ಟೋಬರ್ ಅಂತ್ಯಕ್ಕೆ ನಮ್ಮ ಕ್ಲಿನಿಕ್ ಸಂಪೂರ್ಣ ರಾಜ್ಯದಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ), ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗಿರುವಂತ ನಮ್ಮ ಕ್ಲಿನಿಕ್ ಕೇಂದ್ರಗಳನ್ನು ರಾಜ್ಯಾಧ್ಯಂತ ಶೀಘ್ರದಲ್ಲೇ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು, ರಾಜ್ಯಾಧ್ಯಂತ ವಿಸ್ತರಣೆ ಮಾಡುವಂತ ಗುರಿಯನ್ನು ಹೊಂದಲಾಗಿದೆ. ಬೆಂಗಳೂರಿನ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭವಾಗಲಿದೆ ಎಂದರು.
ರಾಜ್ಯಾಧ್ಯಂತ 438 ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುತ್ತದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಜೊತೆಗೆ ಚರ್ಚಿಸಿ, ಅಂತಿಮಗೊಳಿಸಿ, ಆ ಬಗ್ಗೆ ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದರು.
ಅಂದಹಾಗೇ ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್ ಗಳಲ್ಲಿ ಒಬ್ಬ ಡಾಕ್ಟರ್, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ತಪಾಸಣೆ ಬಳಿಕ, ಉಚಿತ ಔಷಧ ವಿತರಣೆ ಮಾಡಲಾಗುತ್ತಿದೆ.