ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು ( VTU ) ಮೂರು ವರ್ಷಗಳಲ್ಲಿ ಐಐಟಿ ಮಟ್ಟಕ್ಕೆ ಅಭಿವೃದ್ಧಿ ಪಡಿಸಲು ಸರಕಾರ ಬದ್ಧವಾಗಿದ್ದು, ಇದಕ್ಕೆ ಬೇಕಾದ ಸಕಲ ನೆರವನ್ನೂ ನೀಡಲಾಗುವುದು. ಜತೆಗೆ ಕಿಂಚಿತ್ತೂ ಹಸ್ತಕ್ಷೇಪವಿಲ್ಲದಂತಹ ಸ್ವಾತಂತ್ರ ಮತ್ತು ಸ್ವಾಯತ್ತತೆಯನ್ನು ಕೊಡಲಾಗುವುದು. ಈ ಮೂಲಕ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗ್ರಸಂಸ್ಥೆಯನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಹೇಳಿದರು.
ಯುವಿಸಿಇ ವಿಶ್ವವಿದ್ಯಾಲಯವನ್ನು ಗುರುವಾರ ಕೆ.ಆರ್ ವೃತ್ತದ ಕ್ಯಾಂಪಸ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, “ನೂತನ ವಿ.ವಿ.ಗೆ ಹಣಕಾಸು, ಅತ್ಯುತ್ತಮ ಬೋಧಕ ವೃಂದ, ಮೂಲಸೌಕರ್ಯ ಎಲ್ಲವನ್ನೂ ಧಾರಾಳವಾಗಿ ಕೊಡಲಾಗುವುದು. ನಮ್ಮ ವಿದ್ಯಾರ್ಥಿಗಳು ಉತ್ಕೃಷ್ಟ ಶಿಕ್ಷಣಕ್ಕೆ ಐಐಟಿ ತರಹದ ಸಂಸ್ಥೆಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಯುವಿಸಿಇ ಜತೆಗೆ ರಾಜ್ಯದ ಇನ್ನೂ ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಬೆಳೆಸುವ ಸಂಕಲ್ಪ ಮಾಡಲಾಗಿದೆ” ಎಂದು ಒತ್ತಿ ಹೇಳಿದರು.
ಯುವಿಸಿಇ ಯನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಬೆಳೆಸುವ ಕೆಲಸ ಎಂದೋ ಆಗಬೇಕಿತ್ತು. ಏಕೆಂದರೆ ಇಲ್ಲಿ ಪ್ರತಿಭೆಗೆ ಕೊರತೆ ಇರಲಿಲ್ಲ. ಆದರೆ, ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಇತ್ತು. ನೂತನ ಕ್ಯಾಂಪಸ್ಸಿನಲ್ಲಿ ಕ್ಷುಲ್ಲಕ ರಾಜಕೀಯಕ್ಕೆ ಆಸ್ಪದ ಕೊಡದೆ, ಸ್ವಾಯತ್ತತೆಯನ್ನು ಸಾಧನೆಯ ಸೋಪಾನವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈ ವಿ.ವಿ.ಯನ್ನು ಮೂರು ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಸರಕಾರದ ಪಣವಾಗಿದೆ. ಹೀಗಾಗಿಯೇ, 2030ಕ್ಕೆ ಇಟ್ಟುಕೊಂಡಿದ್ದ ಗುರಿಯ ಕಾಲಾವಧಿಯನ್ನು ಇಳಿಸಲಾಗಿದೆ. ಶೈಕ್ಷಣಿಕ ಸುಧಾರಣೆಗೆ ಬದ್ಧವಾಗಿರುವ ರಾಜ್ಯ ಸರಕಾರ ಸಂಪೂರ್ಣ ಬೆಂಬಲ ನೀಡಿ, ಇದನ್ನು ಮಾಡಿಯೇ ತೀರುತ್ತದೆ ಎಂದು ಅವರು ನುಡಿದರು.
“ಈ ದೇಶ ಕಂಡ ಅತ್ಯಂತ ಮೇಧಾವಿ ಎಂಜಿನಿಯರ್ ವಿಶ್ವೇಶ್ವರಯ್ಯನವರ ಜನ್ಮದಿನದಂದೇ ಈ ವಿ.ವಿ. ಅಸ್ತಿತ್ವಕ್ಕೆ ಬಂದಿದೆ. ಇದು ಅವರೇ ಹುಟ್ಟುಹಾಕಿದ ಕಾಲೇಜು. ಬದ್ಧತೆ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಹೇಗೆನ್ನುವುದನ್ನು ತೋರಿಸಿದ ಸರ್ ಎಂವಿ ನಮಗೆ ಪ್ರೇರಣೆ ಆಗಿದ್ದಾರೆ. ಈಗ ಪ್ರಧಾನಿ ಮೋದಿಯವರು ಜಾಗತಿಕ ಸಮುದಾಯವು ಗುರುತಿಸುವಂತಹ ಬದಲಾವಣೆಗಳನ್ನು ತಂದಿದ್ದಾರೆ. ಯುವಿಸಿಇಯನ್ನು ವಿಶ್ವವಿದ್ಯಾಲಯವನ್ನಾಗಿ ಮಾಡುವಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಬದ್ಧತೆ ಶ್ಲಾಘನೀಯವಾಗಿದೆ” ಎಂದು ಅವರು ಬಣ್ಣಿಸಿದರು.
ತಾರ್ಕಿಕ ಆಲೋಚನೆ ಮತ್ತು ವಿಶ್ಲೇಷಣಾತ್ಮಕ ಆಲೋಚನೆ ಮೇಳೈಸಿದಾಗ ಅತ್ಯುತ್ತಮ ಎಂಜಿನಿಯರುಗಳು ಸೃಷ್ಟಿಯಾಗುತ್ತಾರೆ. ನೀವೆಲ್ಲರೂ ಪರಿವರ್ತನೆಯ ಸಂಕ್ರಮಣಾವಸ್ಥೆಯಲ್ಲಿರುವ ಕಾಲದಲ್ಲಿ ಇದ್ದೀರಿ. ನಿಮ್ಮ ಕಲಿಕೆ ನಿರಂತರವಾಗಿರಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಸೋಲುವ ಅಪಾಯವಿದೆ. ಈ ಎಚ್ಚರ ವಿದ್ಯಾರ್ಥಿಗಳಲ್ಲಿ ಇದ್ದು, ಮನುಷ್ಯಪ್ರಯತ್ನದಲ್ಲಿ ನಂಬಿಕೆ ಇಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಭೂ ಮಾಲೀಕತ್ವ ಮತ್ತು ಬಂಡವಾಳಶಾಹಿಗಳ ಯುಗ ಮುಗಿದು ಹೋಗಿದೆ. ಇದೇನಿದ್ದರೂ ಜ್ಞಾನದ ಯುಗ. ಇದನ್ನು ಅರ್ಥ ಮಾಡಿಕೊಂಡರೆ ದೇಶವನ್ನೇ ಆಳಬಹುದು. ಯುವಿಸಿಇ ವಿದ್ಯಾರ್ಥಿಗಳು ಇದನ್ನು ಸಾಧ್ಯ ಮಾಡಿ ತೋರಿಸಲಿದ್ದಾರೆ ಎನ್ನುವ ವಿಶ್ವಾಸ ತಮ್ಮದಾಗಿದೆ ಎಂದು ಅವರು ಹೇಳಿದರು.
ಕ್ರಿಯಾಯೋಜನೆ ತೀರ್ಮಾನ
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, “ಯುವಿಸಿಇಯನ್ನು ಸ್ವಾಯತ್ತ ವಿವಿ ಮಾಡುವ ಬಗ್ಗೆ 20 ವರ್ಷಗಳಿಂದಲೂ ಮಾತು ಕೇಳಿಬರುತ್ತಿತ್ತು. ಆದರೆ ಈಗಿನ ಸರಕಾರ ಮಾತ್ರ ಈ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದೆ. ಈ ವಿ.ವಿ.ಯ ಪರಿಪೂರ್ಣ ಅಭಿವೃದ್ಧಿಗೆ ಸದ್ಯದಲ್ಲೇ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಈ ಮೂಲಕ ಐಐಟಿಯನ್ನೂ ಮೀರಿಸುವಂತೆ ಬೆಳೆಸಲಾಗುವುದು” ಎಂದರು.
ಸಿಇಟಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಶಿಕ್ಷಣಕ್ಕೆ ಯುವಿಸಿಇಯನ್ನು ಮೊದಲು ಆಯ್ಕೆ ಮಾಡಿಕೊಳ್ಳುವಂತೆ ಮಾಡಲಿದ್ದೇವೆ. ಈ ಬಗ್ಗೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕೂಡ ಅಪಾರ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.
BIG BREAKING NEWS: ವಿಧಾನ ಪರಿಷತ್ನಲ್ಲಿ ಧ್ವನಿ ಮತದ ಮೂಲಕ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ರಾಜ್ಯದ ಉನ್ನತ ಶಿಕ್ಷಣದಲ್ಲಿ ಅಪಾರ ಸುಧಾರಣೆ ಆಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳ ದೂರದೃಷ್ಟಿ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಉದ್ಯೋಗ ಸಿಗುವಂತಹ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಇದರಲ್ಲಿ ಸ್ವಾಯತ್ತತೆ, ಸ್ವಾತಂತ್ರ ಮತ್ತು ಪಾರದರ್ಶಕತೆಗೆ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಯುವಿಸಿಯ ವಿಷನ್ ಡಾಕ್ಯುಮೆಂಟ್ ಅನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಯುವಿಸಿಇ ಆಡಳಿತ ಮಂಡಲಿ ಮುಖ್ಯಸ್ಥ ಬಿ.ಮುತ್ತುರಾಮನ್ ಮತ್ತು ಐಐಐಟಿ ನಿರ್ದೇಶಕ ಪ್ರೊ ಸದಗೋಪಬ್ ಮಾತನಾಡಿದರು. ಬೆಂಗಳೂರು ವಿವಿ ಕುಲಪತಿ ಡಾ.ಜಯಕರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಪ್ರಾಂಶುಪಾಲ ಪ್ರೊ.ಎಚ್.ಎನ್. ರಮೇಶ್ ಮುಂತಾದವರು ಉಪಸ್ಥಿತರಿದ್ದರು.