ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿ ಬೆಲೆ ಮತ್ತು ಭತ್ತದ ಬಿತ್ತನೆ ಕಡಿಮೆಯಾದ ನಂತ್ರ ಇಳುವರಿ ಕಡಿಮೆಯಾಗುವ ಭೀತಿಯಿಂದ ಸರ್ಕಾರ ಅಕ್ಕಿ ರಫ್ತಿಗೆ ಕಡಿವಾಣ ಹಾಕಲು ನಿರ್ಧರಿಸಿದೆ. ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ. ಅಕ್ಕಿಯನ್ನ ವಿದೇಶಕ್ಕೆ ರಫ್ತು ಮಾಡುವಾಗ ಶೇ.20 ರಫ್ತು ಸುಂಕವನ್ನ ಪಾವತಿಸಬೇಕಾಗುತ್ತದೆ. ಇದರಿಂದ ವಿದೇಶಕ್ಕೆ ಅಕ್ಕಿ ಕಳುಹಿಸುವುದು ದುಬಾರಿಯಾಗಲಿದೆ.
ಬಾಸ್ಮತಿಯೇತರ ಅಕ್ಕಿಯ ಕೆಲವು ತಳಿಗಳ ರಫ್ತಿನ ಮೇಲೆ ಸರ್ಕಾರವು ಶೇ.20 ರಫ್ತು ತೆರಿಗೆಯನ್ನ ವಿಧಿಸಿದೆ. ಇತ್ತೀಚಿನ ದಿನಗಳಲ್ಲಿ ಅಕ್ಕಿಯ ರಫ್ತು ಹೆಚ್ಚಾಗಿದೆ. ಇದನ್ನ ತಡೆಯಲು ಅಕ್ಕಿ ರಫ್ತಿನ ಮೇಲೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ಸೆಪ್ಟೆಂಬರ್ 9, 2022 ರಿಂದ ಜಾರಿಗೆ ಬರಲಿದೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆ ಈ ಮಾಹಿತಿ ನೀಡಿದೆ.
ವಾಸ್ತವವಾಗಿ, ಆಹಾರ ಸರಬರಾಜು ಸಚಿವಾಲಯದ ಶಿಫಾರಸುಗಳ ನಂತರ, ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆಹಾರ ಸರಬರಾಜು ಸಚಿವಾಲಯವು ಪಿಡಿಎಸ್ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗಾಗಿ ಸಾಕಷ್ಟು ದಾಸ್ತಾನು ಇರಿಸಿಕೊಳ್ಳಲು ಅಕ್ಕಿ ರಫ್ತಿನ ಮೇಲೆ ತೆರಿಗೆ ವಿಧಿಸಲು ಸಲಹೆ ನೀಡಿತ್ತು.