ಚಿದಂಬರಂ : ತಮಿಳುನಾಡಿನ ಚಿದಂಬರಂನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಸರ್ಕಾರಿ ಶಾಲೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಸತ್ತ ನವಜಾತ ಶಿಶುವನ್ನ ಶಾಲೆಯ ಶೌಚಾಲಯದ ಬಳಿ ಎಸೆದಿದ್ದಾಳೆ. ಈ ಘಟನೆ ಇಡೀ ಪ್ರದೇಶದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಘಟನೆಯಿಂದ ಶಾಲಾ ಆಡಳಿತ ಮಂಡಳಿ ಕೂಡ ಬೆಚ್ಚಿಬಿದ್ದಿದೆ. ಇನ್ನು ಈ ಪ್ರಕರಣವನ್ನು ಎಲ್ಲಾ ಸಂಭಾವ್ಯ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.
ಶಾಲೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ.!
ವಿದ್ಯಾರ್ಥಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಕಡಲೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಮಿಳುನಾಡಿನ ಚಿದಂಬರಂ ಬಳಿಯ ಸರ್ಕಾರಿ ಶಾಲೆಯ 11ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿ ಮಗುವಿನ ಶವವನ್ನ ಶಾಲೆಯ ಶೌಚಾಲಯದ ಬಳಿ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನ ಗರ್ಭಿಣಿ ಮಾಡಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನವಜಾತ ಶಿಶುವನ್ನು ಶೌಚಾಲಯದ ಬಳಿ ಎಸೆದಿದ್ದಾರೆ.!
ಶಾಲಾ ಅಧಿಕಾರಿಗಳು ಗುರುವಾರ ಶಾಲೆಯ ಶೌಚಾಲಯದ ಬಳಿ ಮಗುವಿನ ಶವವನ್ನ ಕಂಡು ಭುವನಗಿರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಶುಕ್ರವಾರ ಸಂಜೆ ಬಾಲಕಿ ಪತ್ತೆಯಾಗಿದ್ದು, ತಾನು ಮಗುವಿಗೆ ಜನ್ಮ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ನೋವು ಅನುಭವಿಸಿ ಶೌಚಕ್ಕೆ ಹೋಗಿ ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿಸಿದ್ದಾಳೆ. ಮಗು ಸತ್ತೇ ಹುಟ್ಟಿದೆ ಎಂದು ಬಾಲಕಿ ಹೇಳಿದ್ದು, ಯಾರ ಸಹಾಯವೂ ಇಲ್ಲದೇ ಹೆರಿಗೆಯಾಗಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ತೊಡಗಿರುವ ಪೊಲೀಸರು
ಬಾಲಕಿ ಪೆನ್ನಿನಿಂದ ಹೊಕ್ಕುಳಬಳ್ಳಿಯನ್ನ ಕತ್ತರಿಸಿ ತರಗತಿಗೆ ಮರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಗರ್ಭಿಣಿಯಾಗಿರುವ ವಿಚಾರವನ್ನ ಶಾಲೆ ಅಥವಾ ಮನೆಯವರಲ್ಲಿ ಯಾರಿಗೂ ಹೇಳಿಲ್ಲ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯನ್ನ ಗರ್ಭಿಣಿಯನ್ನಾಗಿ ಮಾಡಿದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಆಕೆಯ ಸಂಬಂಧಿಕರು ಮತ್ತು ಸ್ಥಳೀಯರು ಸೇರಿದಂತೆ ಹಲವರನ್ನ ವಿಚಾರಣೆ ನಡೆಸುತ್ತಿದ್ದಾರೆ.