ಜೈಪುರ : ಜೈಪುರದ ಸುಬೋಧ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ತುಂಬಾನೇ ಕೆಟ್ಟದಾಗಿ ವರ್ತಿಸಿದ್ದು, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನ ಗ್ರಂಥಾಲಯದಲ್ಲಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ 4 ಗಂಟೆಗಳ ಕಾಲ ಶಾಲಾ ಗ್ರಂಥಾಲಯದಲ್ಲಿ ಕೂಡಿ ಹಾಕಲಾಯಿತು. ಇನ್ನು ಈ ವಿಷಯ ತಿಳಿದ ಕೂಡಲೇ ಪೋಷಕರು, ಶಾಲೆ ತಲುಪಿ ಪ್ರತಿಭಟಿಸಲು ಪ್ರಾರಂಭಿಸಿದರು. ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ವಿದ್ಯಾರ್ಥಿಗಳನ್ನ ಗ್ರಂಥಾಲಯದಿಂದ ಹೊರಗೆ ಕರೆತಂದಿದೆ.
ಸುಬೋಧ್ ಪಬ್ಲಿಕ್ ಶಾಲೆಯ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನ ಮಂಗಳವಾರ ಮೊದಲ ಅವಧಿ ಮುಗಿದ ನಂತರ ಗ್ರಂಥಾಲಯಕ್ಕೆ ಕರೆಸಲಾಯಿತು. ನಂತ್ರ ಅವ್ರನ್ನ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಗ್ರಂಥಾಲಯದಲ್ಲಿ ಇರಿಸಲಾಯಿತು. ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡಿಲ್ಲ. ಇನ್ನು ಆಹಾರವನ್ನ ಸಹ ತಿನ್ನಲು ಅನುಮತಿ ಕೊಟ್ಟಿಲ್ಲ. ಕೆಲವು ವಿದ್ಯಾರ್ಥಿಗಳು ಇದನ್ನ ಮೊಬೈಲ್ ಮೂಲಕ ತಮ್ಮ ಪೋಷಕರಿಗೆ ತಿಳಿಸಿದ್ರು, ಪೋಷಕರು ತಕ್ಷಣ ಶಾಲೆಗೆ ಧಾವಿಸಿ ಪ್ರತಿಭಟಿಸಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮಾಡಿದ ಆರೋಪಗಳಿಗೆ ಶಾಲೆಯ ಪ್ರಾಂಶುಪಾಲರು ಪ್ರತಿಕ್ರಿಯಿಸಿ, ಶುಲ್ಕವನ್ನು ಪಾವತಿಸದ ಕಾರಣ ಅವರು ಯಾರಿಗೂ ಕಿರುಕುಳ ನೀಡಿಲ್ಲ ಎಂದು ಹೇಳಿದರು. “ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಶಾಲೆಯ ವಿರುದ್ಧ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ” ಎಂದಿದ್ದಾರೆ.
ಏತನ್ಮಧ್ಯೆ, ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದ್ದು, ತನಿಖಾ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು.