ಕೊಲಂಬೊ : ವಿವಾದಾತ್ಮಕ ಸ್ವಯಃ ಘೋಷಿತ ದೇವಮಾನವ ನಿತ್ಯಾನಂದ ಶ್ರೀಲಂಕಾದಲ್ಲಿ ಆಶ್ರಯ ಕೋರಿದ್ದಾರೆ ಅನ್ನೋದನ್ನ ಶ್ರೀಲಂಕಾ ನಿರಾಕರಿಸಿದೆ.
ಭಾರತೀಯ ಮಾಧ್ಯಮಗಳ ಒಂದು ವಿಭಾಗವು ವರದಿ ಮಾಡಿರುವಂತೆ ಈ ವಿನಂತಿಯು ನಿಜವಲ್ಲ ಎಂದು ಅಧ್ಯಕ್ಷರ ಕಚೇರಿಯನ್ನ ಉಲ್ಲೇಖಿಸಿ ವಾಹಿನಿ ಮಂಗಳವಾರ ವರದಿ ಮಾಡಿದೆ.
ಶ್ರೀಲಂಕಾವನ್ನ ಪ್ರವೇಶಿಸಲು ಮತ್ತು ನಂತ್ರ ಆಶ್ರಯ ಪಡೆಯಲು ವೈದ್ಯಕೀಯ ವೀಸಾ ಕೋರಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಹಿಂದೂ ಗುರುಗಳಿಂದ ಯಾವುದೇ ಮನವಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು “ವಿದೇಶಾಂಗ ಸಚಿವಾಲಯಕ್ಕೂ ಸಹ ಅಂತಹ ಯಾವುದೇ ಮನವಿ ಬಂದಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂದ್ಹಾಗೆ, ಸ್ವಯಂ ಘೋಷಿತ ದೇವಮಾನವ ಮತ್ತು ಅತ್ಯಾಚಾರದ ಆರೋಪಿ ನಿತ್ಯಾನಂದ ಆಗಸ್ಟ್ 7ರಂದು ಅಧ್ಯಕ್ಷ ವಿಕ್ರಮಸಿಂಘೆ ಅವ್ರಿಗೆ ತನ್ನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಉಲ್ಲೇಖಿಸಿ ಪತ್ರ ಬರೆದಿದ್ದರು ಎಂದು ಕಳೆದ ವಾರ ಭಾರತದಲ್ಲಿ ವರದಿಯಾಗಿತ್ತು.
ನಿತ್ಯಾನಂದ ತನಗೆ “ತಕ್ಷಣದ” ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ. ಈಕ್ವೆಡಾರ್ ಕರಾವಳಿಯಲ್ಲಿ ಸ್ವತಃ ತಾವೇ ಸ್ಥಾಪಿಸಿದ “ಶ್ರೀಕೈಲಾಸ” ಎಂಬ ಸಾರ್ವಭೌಮ ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಮ್ಮ ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ಇದೆ ಎಂದು ಬರೆದಿದ್ದರು ಎಂದು ಹೇಳಲಾಗಿತ್ತು.