ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಹೊಸ ಪಡಿತರ ಚೀಟಿ ಪಡೆಯಲು ಬಯಸಿದ್ರೆ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನ ತಂದಿದೆ. ನೀವು ಪಡಿತರವನ್ನ ಮೇರಾ ರೇಷನ್ ಮೇರಾ ಅಧಿಕಾರ್ ಕಾರ್ಯಕ್ರಮದ ಅಡಿಯಲ್ಲಿ ನೋಂದಾಯಿಸಬೇಕು. ಈ ನೋಂದಣಿ ಸೌಲಭ್ಯವನ್ನ ಸರ್ಕಾರವು ಆಗಸ್ಟ್ 5ರಂದು ಪ್ರಾರಂಭಿಸಿದ್ದು, ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 11 ರಾಜ್ಯಗಳಲ್ಲಿ ಪಡಿತರ ಚೀಟಿಗಳನ್ನ ವಿತರಿಸಲು ಪ್ರಾರಂಭಿಸಿದೆ. ಈ ಸೌಲಭ್ಯವನ್ನ ಪ್ರಾರಂಭಿಸಿದ ನಂತ್ರ ಸುಮಾರು 13,000 ಜನರು ಈ ಸೌಲಭ್ಯಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ. ವಸತಿ ರಹಿತರು, ಕಡು ಬಡವರು, ವಲಸಿಗರು ಮತ್ತು ಇತರ ಅರ್ಹ ಫಲಾನುಭವಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳನ್ನ ತ್ವರಿತವಾಗಿ ಗುರುತಿಸುವುದು ಜಂಟಿ ನೋಂದಣಿಯ ಉದ್ದೇಶವಾಗಿದೆ ಎಂದು ಡಿಎಫ್ಪಿಡಿ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದರು. ಇನ್ನೂ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನ ಕಾರ್ಯಕ್ರಮದಲ್ಲಿ ಸೇರಿಸಲು ಪರಿಗಣನೆಯಲ್ಲಿದೆ. ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪುದುಚೇರಿ, ಸಿಕ್ಕಿಂ ಮತ್ತು ಉತ್ತರ ಪ್ರದೇಶಗಳೊಂದಿಗೆ ಸಾಮಾನ್ಯ ನೋಂದಣಿ ಸೌಲಭ್ಯದ ವ್ಯಾಪ್ತಿಯನ್ನ ಒದಗಿಸಲಾಗುವುದು. ಈ ರಾಜ್ಯಗಳಲ್ಲಿ ಸಾಮಾನ್ಯ ನೋಂದಣಿ ಸೌಲಭ್ಯಕ್ಕಾಗಿ ಸಿದ್ಧತೆಗಳನ್ನ ಪರಿಗಣಿಸಲಾಗುತ್ತಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕಾರ್ಯಕ್ರಮವನ್ನ ಅನುಷ್ಠಾನಗೊಳಿಸಲು ತಮ್ಮ ಇಚ್ಛೆಯನ್ನ ವ್ಯಕ್ತಪಡಿಸಿವೆ.
ಆಜಾದಿ ಅಮೃತ ಮಹೋತ್ಸವದಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಎನ್ಎಫ್ಎಸ್ಎ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅನುಕೂಲಕ್ಕಾಗಿ ಕಾರ್ಯದರ್ಶಿ (DFPD) 2022ರ ಆಗಸ್ಟ್ 5ರಂದು ಅಸ್ಸಾಂ, ಗೋವಾ, ಲಕ್ಷದ್ವೀಪ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ತ್ರಿಪುರಾ ಮತ್ತು ಉತ್ತರಾಖಂಡ್ 11 ರಾಜ್ಯಗಳಿಗೆ ವೆಬ್ ಆಧಾರಿತ ನೋಂದಣಿ ಸೌಲಭ್ಯವನ್ನು (ಮೇರಾ ರೇಷನ್ ಮೇರಾ ಅಧಿಕಾರ್) ಪ್ರಾರಂಭಿಸಿದರು. ಈ ಸೌಲಭ್ಯವು https://nfsa.gov.in ನಲ್ಲಿ ಲಭ್ಯವಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ದೇಶಾದ್ಯಂತ ಸುಮಾರು 81.35 ಕೋಟಿ ಜನರಿಗೆ ಗರಿಷ್ಠ ವ್ಯಾಪ್ತಿಯನ್ನ ಒದಗಿಸುತ್ತದೆ. ಪ್ರಸ್ತುತ, ಸುಮಾರು 79.77 ಕೋಟಿ ಜನರು ಈ ಕಾಯ್ದೆಯಡಿ ಸಬ್ಸಿಡಿ ಆಹಾರ ಧಾನ್ಯಗಳನ್ನ ಪಡೆಯುತ್ತಿದ್ದಾರೆ.