ಮಂಗಳೂರು: ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ 32 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ.
ಎರಡು ತಿಂಗಳ ಹಿಂದೆ ದುಷ್ಕರ್ಮಿಗಳ ಚೂಕು ಇರಿತಕ್ಕೆ ಬಲಿಯಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ತನಿಖೆಯನ್ನು ಎನ್ಐಎ ತಂಡ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಾಹಿತಿಯನ್ನಾಧರಿಸಿ 32 ಕಡೆ ಮನೆ ಹಾಗೂ ಕೆಲ ಖಾಸಗಿ ಕಟ್ಟಡಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆಗೆ ಒಳಪಡಿಸಿದೆ. ಎನ್ಐಎ ಅಧಿಕಾರಿಗಳ ತಂಡಕ್ಕೆ ರಾಜ್ಯ ಪೊಲೀಸರು ಕೂಡ ಬೆಂಬಲ ನೀಡಿದ್ದಾರೆ.
ಘಟನೆ ಹಿನ್ನೆಲೆ
ಕೋಳಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು