ನವದೆಹಲಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ವಿಸ್ತರಣೆಯನ್ನ ಪರಿಗಣಿಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಹೊಸ ಫಲಾನುಭವಿಗಳಿಗೆ ನಾಮಮಾತ್ರದ ಪ್ರೀಮಿಯಂನಲ್ಲಿ ನೀಡಲು ಯೋಜಿಸುತ್ತಿದೆ ಎಂದರು. ಅಂದ್ಹಾಗೆ, ಈ ಯೋಜನೆಯನ್ನ 2018ರಲ್ಲಿ ಪ್ರಧಾನಿ ಮೋದಿ ಅವ್ರು ಪ್ರಾರಂಭಿಸಿದರು. ಇದರ ಅಡಿಯಲ್ಲಿ, 10.74 ಕೋಟಿ ಕುಟುಂಬಗಳು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿವೆ.
ಈ ಮೂಲಕ, ಅಗತ್ಯವಿರುವ ಎಲ್ಲರಿಗೂ ನಾವು ಪ್ರಯೋಜನವನ್ನ ನೀಡಲು ಸಾಧ್ಯವಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು. ಇದನ್ನು ಸಾಧಾರಣ ಪ್ರೀಮಿಯಂನಲ್ಲಿ ಜನರಿಗೆ ತಲುಪಿಸಲು ಸಿದ್ಧತೆಗಳನ್ನ ಮಾಡಲಾಗುತ್ತಿದೆ. “ಶ್ರೀಮಂತ ಅಥವಾ ಬಡವರಲ್ಲದ ದೇಶದ ಮಧ್ಯಮ ಆದಾಯದ ವಿಭಾಗವನ್ನು ನೋಡಿಕೊಳ್ಳುವ ಅಗತ್ಯವಿದೆ. ಅವರನ್ನ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಪರಿಗಣಿಸಲಾಗುತ್ತಿದೆ” ಎಂದರು.
ಈ ಯೋಜನೆಯು ಪ್ರಸ್ತುತ ಬಡವರು ಮತ್ತು ದುರ್ಬಲ ವರ್ಗಗಳ ಜನರನ್ನ ಒಳಗೊಂಡಿದೆ. ಆರೋಗ್ಯ ವಿಮೆಯ ಪ್ರೀಮಿಯಂ ಪ್ರಸ್ತುತ ಸುಮಾರು 1200 ರಿಂದ 1300 ರೂ.ಗಳವರೆಗೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ರ ಅನುಪಾತದಲ್ಲಿ ವೆಚ್ಚವನ್ನ ಭರಿಸುತ್ತವೆ.
“ದೇಶದಲ್ಲಿ ವರ್ಷಕ್ಕೆ 1,00,000 ರೂ.ಗಳನ್ನು ಸಂಪಾದಿಸುವ ಜನರಿದ್ದಾರೆ. ವಾರ್ಷಿಕವಾಗಿ 10,00,000 ರೂ.ಗಳನ್ನ ಗಳಿಸುವ ಜನರೂ ಇದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಎರಡನೆಯವನು ಹೆಚ್ಚು ಸಂಪಾದಿಸಬಹುದು. ಆದ್ರೆ, ಆತ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಾಧ್ಯವಾಗದಿರಬಹುದು. ಆದ್ದರಿಂದ ನಾವು ಫಲಾನುಭವಿಗಳ ಪಟ್ಟಿಯನ್ನು ವಿಸ್ತರಿಸಬೇಕಾಗಿದೆ. ಈ ಯೋಜನೆ ಗಂಭೀರ ಪರಿಗಣನೆಯಲ್ಲಿದೆ ” ಎಂದರು.
ಪ್ರಸ್ತುತ, ದೇಶಾದ್ಯಂತ ಸುಮಾರು 28,000 ಆಸ್ಪತ್ರೆಗಳು ಕೇಂದ್ರದ ಯೋಜನೆಯ ಭಾಗವಾಗಿವೆ. ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ, ನಗದುರಹಿತ ಚಿಕಿತ್ಸೆಯನ್ನ ಒದಗಿಸಲು ಸರ್ಕಾರವು ಈಗಾಗಲೇ ಹೆಚ್ಚು ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳನ್ನು ಎಂಪ್ಯಾನೆಲ್ ಮಾಡಲು ಪ್ರಾರಂಭಿಸಿದೆ ಎಂದು ಅಧಿಕಾರಿ ಹೇಳಿದರು.
ಪಿಜಿಐ-ಚಂಡೀಗಢದ ಮಾಜಿ ನಿರ್ದೇಶಕ ಡಾ.ಕೆ.ಕೆ.ತಲ್ವಾರ್ ಮಾತನಾಡಿ, “ಜನಸಂಖ್ಯೆಯ ದೊಡ್ಡ ವಿಭಾಗವು ಆಯುಷ್ಮಾನ್ ಭಾರತ್ ಯೋಜನೆಯಡಿ ಬರುವುದಿಲ್ಲ. ಖಾಸಗಿ ವಿಮೆಯನ್ನ ಖರೀದಿಸುವುದು ಆತನಿಗೆ ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಅವರಿಗಾಗಿ ಒಂದು ಯೋಜನೆಯನ್ನು ತರಲು ಯೋಚಿಸುತ್ತಿದ್ದರೆ, ಅದು ಉತ್ತಮ ಹೆಜ್ಜೆಯಾಗಿದೆ” ಎಂದರು.