ಕಾಬೂಲ್ : ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 14 ಮಂದಿ ಸಾವನ್ನಪ್ಪಿದ್ರೆ ಸುಮಾರು 200 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಈ ಸ್ಟೋಟದಲ್ಲಿ ಮಸೀದಿಯ ಇಮಾಮ್ ಮೌಲ್ವಿ ಮುಜೀಬ್ ರೆಹಮಾನ್ ಅನ್ಸಾರಿ ಸಾವನ್ನಪ್ಪಿದ್ದಾರೆ. ಅಂದ್ಹಾಗೆ, ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ಈ ಸುದ್ದಿಯನ್ನು ನೀಡಿದೆ. ಆದಾಗ್ಯೂ, ಈ ಬಗ್ಗೆ ತಾಲಿಬಾನ್ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಅಫ್ಘಾನಿಸ್ತಾನದ ಪತ್ರಕರ್ತ ಬಿಲಾಲ್ ಸರ್ವಾರಿ ಈ ಘಟನೆಯ ಬಗ್ಗೆ ಟ್ವಿಟರ್ ಹ್ಯಾಂಡಲ್ನಿಂದ, “ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ರಕ್ತದ ಅಗತ್ಯವಿದೆ ಮತ್ತು ಪ್ರಸ್ತುತ ಆಸ್ಪತ್ರೆಯಲ್ಲಿ ಯಾವುದೇ ರಕ್ತ ಲಭ್ಯವಿಲ್ಲ” ಎಂದು ಹೇಳಿದ್ದಾರೆ. ಇನ್ನು ಕೆಲವೇ ಕೆಲವು ವೈದ್ಯರು ಇದ್ದಾರೆ ಎಂದಿದ್ದು, ಸ್ಫೋಟದ ಕೆಲವು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಇವುಗಳಿಂದ ಹೆರಾತ್ʼನ ಗುರ್ಗಾಹ್ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದ ನಂತರ, ಭಾರಿ ವಿನಾಶ ಸಂಭವಿಸಿದೆ ಎಂಬುದು ಸ್ಪಷ್ಟವಾಗಿದೆ. ಇನ್ನು ಈ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಅಂದ್ಹಾಗೆ, ಅಫ್ಘಾನಿಸ್ತಾನದಿಂದ ಯುಎಸ್ ನೇತೃತ್ವದ ಪಡೆಗಳನ್ನ ಹಿಂತೆಗೆದುಕೊಂಡು ಮತ್ತು ತಾಲಿಬಾನ್ ಅಧಿಕಾರಕ್ಕೆ ಬಂದು ಇತ್ತೀಚೆಗೆ ಒಂದು ವರ್ಷವಾಗಿದೆ. ಕಳೆದ ಆಗಸ್ಟ್ನಲ್ಲಿ ತಾಲಿಬಾನ್ ಸುಲಭವಾಗಿ ಅಧಿಕಾರಕ್ಕೆ ಬಂದಿತು, ಯುಎಸ್ ನೇತೃತ್ವದ ಪಡೆಗಳು 20 ವರ್ಷಗಳ ಸಂಘರ್ಷದ ನಂತರ ಎಲ್ಲಾ ವಿದೇಶಿ ಪಡೆಗಳನ್ನ ತರಾತುರಿಯಲ್ಲಿ ಹಿಂತೆಗೆದುಕೊಂಡವು.