ಕೆಎನ್ಎನ್ಡಿಜಿಟಲ್ಡೆಸ್ಕ್: ಚೌತಿಯ ದಿನ ಚಂದ್ರನನ್ನು ನೋಡಬಾರದು ಎಂಬ ಮಾತಿದೆ. ಯಾಕೆಂದರೆ ಆ ದಿನ ಚಂದ್ರನನ್ನು ನೋಡಿದರೆ ಅವರ ಮೇಲೆ ಅಪವಾದ ಬರುತ್ತದಂತೆ. ಕೃಷ್ಣನು ಚೌತಿ ದಿನ ಚಂದ್ರನನ್ನು ನೋಡಿದ ಪರಿಣಾಮ ಅವನಿಗೆ ಶಮಂತಕ ಮಣಿ ಕದ್ದನೆಂಬ ಅಪವಾದ ಬಂದಿತ್ತು. ಹಾಗಿದ್ದರೆ ಆ ದಿನ ಚಂದ್ರನನ್ನು ನೋಡಿದರೆ ಯಾಕೆ ಶಾಪ ಸಿಗುತ್ತದೆ ಗೊತ್ತಾ?
ಒಮ್ಮೆ ಗಣೇಶನು ತನ್ನ ಹುಟ್ಟುಹಬ್ಬದಂದು ಮನೆ ಮನೆಗೆ ಹೋಗಿ ಕಾಯಿ ಕಡುಬು ಹೊಟ್ಟೆತುಂಬ ಉಂಡು ತನ್ನ ವಾಹನ ಮೂಷಿಕವನ್ನೇರಿಬರುತ್ತಿದ್ದಾಗ, ದಾರಿಯಲ್ಲಿ ಒಂದು ಹಾವನ್ನು ಕಂಡು ಭಯಗೊಂಡ ಇಲಿ ಗಣೇಶನನ್ನು ಬೀಳಿಸಿ ಓಡಿತಂತೆ. ಕೆಳಕ್ಕೆ ಬಿದ್ದ ಗಣಪ ಹೊಟ್ಟೆ ಒಡೆದು, ತಿಂದ ಕಡುಬೆಲ್ಲ ನೆಲಕ್ಕೆ ಬಿದ್ದಿತಂತೆ. ಗಣೇಶ ಅದಕ್ಕೆ ಸುಮ್ಮನಿರದೆ ಬಿದ್ದ ತಿಂಡಿಗಳನ್ನೆಲ್ಲ ಮತ್ತೆ ತನ್ನ ಹೊಟ್ಟೆಗೆ ತುಂಬಿಸಿ, ಸರಿದು ಹೋಗುತ್ತಿದ್ದ ಹಾವನ್ನೇ ತನ್ನ ಹೊಟ್ಟೆಗೆ ಕಟ್ಟಿಕೊಂಡನಂತೆ.
ಇವೆಲ್ಲವನ್ನೂ ಮೇಲಿನಿಂದ ನೋಡುತ್ತಿದ್ದ ಚಂದ್ರ ಜೋರಾಗಿ ನಗಲು ಆರಂಭಿಸಿದ. ತನ್ನನ್ನು ನೋಡಿ ಅಪಹಾಸ್ಯ ಮಾಡಿದ ಚಂದ್ರನನ್ನು ನೋಡಿ ಗಣೇಶ ‘ನೀನು ಕ್ಷೀಣಿಸಿ ಹೋಗು, ನಿನ್ನನ್ನು ಯಾವತ್ತೂ ಯಾರು ನೋಡದಂತಿರಲಿ ನೋಡಿದರೆ ಅಪವಾದ ಬರಲಿ ಎಂದು ಶಾಪವನ್ನು ಇಟ್ಟನಂತೆ. ಶಾಪವನ್ನು ಕೊಟ್ಟಾಗ ಚಂದ್ರನಿಗೆ ತನ್ನ ತಪ್ಪಿನ ಅರಿವಾಗಿ ಚಂದ್ರನು ಗಣೇಶನನ್ನು ಕ್ಷಮಾಪಣೆ ಕೇಳಲು, ‘ಶುಕ್ಲ ಪಕ್ಷದಲ್ಲಿ ವೃದ್ದಿಸು ಕೃಷ್ಣಪಕ್ಷದಲ್ಲಿ ಕ್ಷೀಣಿಸು ಎಂದು ಶಾಪವನ್ನು ಭಾಗಶ: ಕಡಿಮೆ ಮಾಡಿದ. ಜೊತೆಗೆ ಯಾರು ನಿನ್ನನ್ನು ಭಾದ್ರಪದ ಚೌತಿ ದಿನ ನೋಡುತ್ತಾರೆ. ಅವರಿಗೆ ಅಪಾಯದ ಬರುತ್ತದೆ ಎಂದು ಹೇಳಿದನಂತೆ. ಈ ಕಾರಣಕ್ಕೆ ಚೌತಿ ದಿನ ಯಾರು ಚಂದ್ರನನ್ನು ನೋಡಬಾರದು.