ಮೈಸೂರು: ಮಳೆ ಹಾನಿ ಹಾನಿಯಿಂದ ತೊಂದರೆಗೆ ಒಳಗಾದವರಿಗೆಲ್ಲಾ ಸೂಕ್ತ ರೀತಿಯಲ್ಲಿ ಪರಿಹಾರ ವಿತರಣೆ ಮಾಡಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಮಳೆ ಹಾನಿಗೆ ಸಂಬಂಧಿಸಿದಂತೆ ಜಿಪಂ ಕಚೇರಿಯಲ್ಲಿ ಆಯೋಜಿಸಲಾಗಿದ ಸಭೆಯಲ್ಲಿ ಮಾತನಾಡಿದ ಸಚಿವರು, ಮನೆ ಹಾನಿ, ಬೆಳೆ ಹಾನಿ ಆದವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಮಳೆಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 14 ಪ್ರಾಣಿಗಳ ಹಾನಿಯಾಗಿದೆ. 3200 ಮನೆಗಳಿಗೆ ಹಾನಿಯಾಗಿದ್ದು ಈ ಪೈಕಿ 2497 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಕೆಆರ್ ಎಸ್ ನಲ್ಲಿ ಒಳ, ಹೊರ ಹರಿವು ಹೆಚ್ಚಳವಾಗಿದ್ದು, ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 72.8% ಹೆಚ್ಚುವರಿ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
3,95,827 ಹೆಕ್ಟೇರ್ ಪೈಕಿ 3,05,127 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 321 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ಈ ಕುರಿತು ಜಂಟಿ ಸರ್ವೆ ಮಾಡಲಾಗುತ್ತಿದೆ. ಭತ್ತ, ಮುಸುಕಿನ ಜೋಳ, ಅಲಸಂದೆ ಬೆಳೆಗಳು ಹೆಚ್ಚು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
29 ಮನೆಗಳಿಗೆ ನೀರು ನುಗ್ಗಿದೆ. 159 ಪ್ರಾಥಮಿಕ ಶಾಲಾ ಕಟ್ಟಡ, 15 ಅಂಗನವಾಡಿ, 13 ಪ್ರಾಥಮಿಕ ಆರೋಗ್ಯ ಕೇಂದ್ರ, 12 ಸೇತುವೆಗಳು, ನಗರದಲ್ಲಿ 30 ಕಿ.ಮೀ., 335 ವಿದ್ಯುತ್ ಕಂಬಗಳು, 11 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಮೂರು ದಿನಗಳಿಂದ ಮಳೆಯಾಗುತ್ತಿದೆ. ಶಾಲೆಗಳಿಗೆ ಮಕ್ಕಳು ಆಗಮಿಸಿದ ಮೇಲೆ ರಜೆ ಘೋಷಣೆ ಮಾಡಿದ್ದರಿಂದ ಪೋಷಕರು ಗೊಂದಲಕ್ಕೀಡಾಗಿದ್ದಾರೆ. ಬಿಇಒ, ಡಿಡಿಪಿಐಗಳು ಎಡವಟ್ಟಿನಿಂದ ಈ ರೀತಿ ಆಗಿದೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು. ಲಿಂಗಾಬೂದಿ ಕೆರೆ ನಿರ್ವಹಣೆ ಮಾಡುತ್ತಿಲ್ಲ. ರಾಜಕಾಲುವೆಗಳ ದುರಸ್ತಿಯಾಗಬೇಕು, ಮನೆಗಳಿಗೆ ನೀರು ಹೋಗದಂತೆ ನೋಡಿಕೊಳ್ಳಬೇಕು. ರಾಜಕಾಲುವೆ ದುರಸ್ತಿ ಮಾಡದೆ ಶಾಶ್ವತ ಪರಿಹಾರ ಅಸಾಧ್ಯ ಎಂದು ಶಾಸಕರುಗಳು ಸಚಿವರ ಗಮನಕ್ಕೆ ತಂದರು. ಈ ಕುರಿತು ಸೂಕ್ತರೀತಿಯಲ್ಲಿ ಕ್ರಮಕೈಗೊಳ್ಳುವಂತೆ ಮೂಡಾ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸಚಿವರು ನಿರ್ದೇಶಿಸಿದರು.
ಶಾಸಕರುಗಳಾದ ನಾಗೇಂದ್ರ, ಜಿ.ಟಿ.ದೇವೇಗೌಡ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮಹಾದೇವ್, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಸ್.ಪಿ. ಚೇತನ್, ಜಿಪಂ ಸಿಇಒ ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು