ಬೆಂಗಳೂರು: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಇಂದು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜೊತೆಗೂಡಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು:
ನಾವು 2013ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದ್ದೆವು, ಬಿಜೆಪಿಯವರು 2018ರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ ತಲೆಬರಹದಡಿ ಸುಮಾರು 600 ಭರವಸೆಗಳನ್ನು ನೀಡಿದ್ದರು. ಅಧಿಕಾರಕ್ಕೆ ಬಂದು 3 ವರ್ಷಗಳ ನಂತರ ಎಷ್ಟು ವಚನಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಈ ಭರವಸೆಗಳಲ್ಲಿ 10% ಕೂಡ ಅವರು ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ನಂತರ ಆ ಮಾತಿನಂತೆ ನಡೆದುಕೊಳ್ಳಬೇಕು. ಆದರೆ ಈ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜನರ ನಂಬಿಕೆಗೆ ದ್ರೋಹ ಎಸಗಿದೆ. ಹಾಗಾಗಿ ನಾವು ಇದನ್ನು ವಚನ ವಂಚನೆ ಎಂದಿದ್ದೇವೆ. ಬಿಜೆಪಿಯ ಭರವಸೆಗಳನ್ನೇ ಅವರ ಮುಂದಿಟ್ಟು ಉತ್ತರಿಸುವಂತೆ ಕೇಳಿದ್ದೇವೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ ನೋಡೋಣ.
ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 150 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದು ವಚನ ನೀಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಕೇವಲ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ 100 ಲಕ್ಷ ಕೋಟಿ ಎಲ್ಲಿ? ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಜನರಿಗೆ ಭರವಸೆ ನೀಡಿದ್ದೆವು. ನಾವು ನೀರಾವರಿಗಾಗಿ 58 ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೆವು.
ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಇದನ್ನು ಈಡೇರಿಸಿದ್ದಾರ? ಹಿಂದೊಮ್ಮೆ ಯಡಿಯೂರಪ್ಪ ಅವರು ನಮ್ಮ ಪಕ್ಷದ ನಾಯಕರಾದ ಉಗ್ರಪ್ಪನವರ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸುವಾಗ ರೈತರ ಸಾಲ ಮನ್ನಾ ಮಾಡಲು ನಮ್ಮ ಬಳಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದ್ದೇವಾ ಎಂದು ಹೇಳಿದ್ದರು. ಆದರೆ ಸಾಲ ಮನ್ನಾ ಮಾಡುವುದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ದುಪ್ಪಟ್ಟಾಗಿದೆಯಾ? ಆದರೆ ರೈತರು ಕೃಷಿ ಕೆಲಸಗಳಿಗಾಗಿ ಮಾಡುವ ಖರ್ಚು ದುಪ್ಪಟ್ಟಾಗಿದೆ. ಈ ಸರ್ಕಾರದ ಯೋಗ್ಯತೆಗೆ ಪರಿಶಿಷ್ಟ ಜಾತಿ, ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡಿಲ್ಲ. ಎಸ್,ಸಿ,ಪಿ/ಟಿ,ಎಸ್,ಪಿ ಯೋಜನೆಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ನೀಡಿಲ್ಲ. ಸರಿಯಾಗಿ ಈ ಯೋಜನೆಗೆ ಹಣ ಬಿಡುಗಡೆ ಆಗಿದ್ದರೆ ಈ ವರ್ಷ ಕನಿಷ್ಠ 40,000 ಕೋಟಿ ಬರಬೇಕಿತ್ತು, ಆದರೆ ಕೇವಲ 28,000 ಕೋಟಿ ಹಣ ನೀಡಿದ್ದಾರೆ. ನಮ್ಮ ಸರ್ಕಾರದ ಕೊನೆ ಬಜೆಟ್ ಗಾತ್ರ 2.02 ಲಕ್ಷ ಕೋಟಿ ಇತ್ತು, ಆಗ ಈ ಯೋಜನೆಗೆ 30,000 ಕೋಟಿ ಹಣ ನೀಡಿದ್ದೆವು. ಈಗ ಬಜೆಟ್ ಗಾತ್ರ 2.65 ಲಕ್ಷ ಕೋಟಿ ಆಗಿದೆ, ಅನುದಾನವೂ ಹೆಚ್ಚಾಗಬೇಕಿತ್ತು. ಪರಿಶಿಷ್ಟ ಸಮುದಾಯದ ಜನರಿಗೆ ಟೋಪಿ ಹಾಕಿದ್ದೀರಿ.
ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಪ್, ಬ್ರಷ್, ಟೂತ್ಪೇಸ್ಟ್ ಒಳಗೊಂಡ ಬಾತ್ ರೂಮ್ ಕಿಟ್ ಹಂಚಿಕೆ ಮಾಡಲು ಆಗಿಲ್ಲ. ದೇವರಾಜ ಅರಸು ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ಕಳೆದ 3 ವರ್ಷಗಳಿಂದ ಹಣ ನೀಡಿಲ್ಲ. ನಮ್ಮ ಸರ್ಕಾರ ಪ್ರತೀ ನಿಗಮದಿಂದ 70-80 ಬೋರ್ ವೆಲ್ ಗಳನ್ನು ಜನರಿಗೆ ತೋಡಿಸಿಕೊಟ್ಟಿದ್ದೆವು, ಈಗ ಪ್ರತಿ ನಿಗಮದಿಂದ 1 ಬೋರ್ ವೆಲ್ ಕೊರೆಸಿಕೊಡ್ತಿದ್ದಾರೆ. ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು, ರಾಜೀವ್ ಗಾಂಧಿ ವಸತಿ ಯೋಜನೆ ಪ್ರಾಧಿಕಾರದಿಂದ ಯಾರು ಬೇಕಾದರೂ ಈ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಈ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಮನೆ ಮಂಜೂರು ಮಾಡಿ, ನಿರ್ಮಾಣ ಮಾಡಿಕೊಟ್ಟಿಲ್ಲ. ನಾವು ಬೆಂಗಳೂರು ನಗರಕ್ಕೆ 1 ಲಕ್ಷ ಮನೆ ನಿರ್ಮಾಣ ಮಾಡಬೇಕೆಂದು ಹಣ ಒದಗಿಸಿ, 1072 ಎಕರೆ ಜಮೀನನ್ನು ನೀಡಿ, ಆನ್ ಲೈನ್ ಮೂಲಕ ಅರ್ಜಿ ಕರೆದು 50,000 ಮನೆಗಳನ್ನು ಮಂಜೂರು ಮಾಡಿದ್ದೆವು, ಈ ಸರ್ಕಾರ ಬಂದಮೇಲೆ ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ. ಇವತ್ತಿನವರೆಗೆ ಹೊಸದಾಗಿ ಅರ್ಜಿ ಕರೆದು ಒಂದು ಮನೆ ನೀಡಿಲ್ಲ.
ಬಡವರಿಗೆ, ರೈತರಿಗೆ, ಯುವಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ. ಇದರ ಜೊತೆಗೆ ರಾಜ್ಯದ ಮಾನ ಹರಾಜು ಹಾಕಿದ್ದಾರೆ. ಲೂಟಿ ಹೊಡೆಯುವುದು ಬಿಟ್ಟು ಬೇರೇನು ಮಾಡುತ್ತಿಲ್ಲ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಸಾಮಾನ್ಯವಾಗಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಮಾತನಾಡಲ್ಲ, ಆದರೆ ಈ ಸರ್ಕಾರದ ಕಮಿಷನ್ ಕಿರುಕುಳ ತಾಳಲಾಗದೆ ಪ್ರಧಾನಿಗಳಿಗೆ ಎರಡನೇ ಬಾರಿ ಪತ್ರ ಬರೆಯಲು ಸಿದ್ದರಾಗಿದ್ದಾರೆ. ಪ್ರಧಾನಿಗಳಿಗೆ ಮೊದಲ ಪತ್ರ ಬರೆದು ವರ್ಷ ಆದರೂ ಅವರು ಏನು ಕ್ರಮ ಕೈಗೊಂಡಿಲ್ಲ, ಹೀಗಾಗಿ ನನ್ನನ್ನೂ ಕೂಡ ಭೇಟಿ ಮಾಡಿ ಸದನದಲ್ಲಿ ಒತ್ತಾಯ ಮಾಡಿ ಎಂದು ಮನವಿ ಮಾಡಿದ್ದರು. ಬೆಂಗಳೂರು ನಗರದಲ್ಲಿ ಕಮಿಷನ್ 40% ಇಂದ 50% ಗೆ ಹೆಚ್ಚಾಗಿದೆ.
ಜನರಿಗೆ ಚುನಾವಣೆ ವೇಳೆ ಭರವಸೆಗಳನ್ನು ನೀಡುವುದು ಸುಮ್ಮನೆನಾ? ನಾವು ನೀಡಿದ್ದ 165 ಭರಸವೆಗಳಲ್ಲಿ 158 ಭರವಸೆಗಳನ್ನು ಈಡೇರಿಸುವ ಜೊತೆಗೆ, 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೆವು. ಬಿಜೆಪಿಯವರು ಜನರಿಗೆ ದ್ರೋಹ ಮಾಡಿ, ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಜನರು ಪ್ರಶ್ನಿಸುತ್ತಾರೆ ಎಂದು ಧಾರ್ಮಿಕ ಹಾಗೂ ಜಾತಿ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಸಾಲ ಜಾಸ್ತಿಯಾಗಿದೆ ಎಂದು ಸಿ.ಟಿ ರವಿ ಹೇಳುತ್ತಿದ್ದರು. ನಮ್ಮ ಸರ್ಕಾರದ ಕೊನೆ ಬಜೆಟ್ ಮಂಡಿಸಿದಾಗ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ನಾನು ಅಧಿಕಾರಕ್ಕೆ ಬರುವ ಮೊದಲು ಈ ಸಾಲ 1 ಲಕ್ಷದ 20 ಸಾವಿರ ಕೋಟಿ ಇತ್ತು. ನಾವು ಸಾಲ ಮಾಡಿದ್ದು ಅಭಿವೃದ್ಧಿ ಯೋಜನೆಗಳು ಹಾಗೂ ಸರ್ಕಾರದ ಆಸ್ತಿ ಸೃಜನೆಗಾಗಿ. ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡಿರಲಿಲ್ಲ, ನಮ್ಮ ಸಾಮರ್ಥ್ಯದ ಆದಾರದ ಮೇಲೆ ಸಾಲ ಮಾಡಿದ್ದೆವು. ನಮ್ಮನ್ನು ಟೀಕಿಸುತ್ತಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಒಟ್ಟು ಸಾಲ 5 ಲಕ್ಷದ 40 ಸಾವಿರ ಕೋಟಿ. ಕೇವಲ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದನ್ನು ವಿತ್ತೀಯ ಶಿಸ್ತು ಎಂದು ಕರೆಯಲು ಆಗುತ್ತಾ? ಕಳೆದ ಒಂದೇ ವರ್ಷದಲ್ಲಿ 80 ಸಾವಿರ ಕೋಟಿ ಸಾಲ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಮಾಡಿದ ಸಾಲವು ರಾಜ್ಯದ ಜಿಡಿಪಿ ಯ 25% ಒಳಗಡೆ ಇತ್ತು, ಫಿಸ್ಕಲ್ ಢಿಫಿಸಿಟ್ 3% ಒಳಗಡೆ ಇತ್ತು ಹಾಗೂ ರಾಜಸ್ವ ಉಳಿಕೆ ಇತ್ತು. ಆದರೆ ಈ ವರ್ಷ 19,000 ಕೋಟಿ ವಿತ್ತೀಯ ಕೊರತೆ ಎದುರಿಸುತ್ತಿದ್ದೇವೆ. ಸಾಲ ತಂದು ಸಂಬಳ ಕೊಡುವ ಪರಿಸ್ಥಿತಿ ಇದೆ. ಈ ವರ್ಷವೊಂದರಲ್ಲೇ 29,000 ಕೋಟಿ ಬಡ್ಡಿ, 14,000 ಕೋಟಿ ಅಸಲು ಸೇರಿ ಒಟ್ಟು 43,000 ಕೋಟಿ ಮರುಪಾವತಿ ಮಾಡಬೇಕು. ಇವೆಲ್ಲಾ ಅನವಶ್ಯಕ ಖರ್ಚುಗಳು. ಈ ಸಾಲದ ಹಣದಲ್ಲೂ 40% ಕಮಿಷನ್ ಹೊಡೆಯುತ್ತಿದ್ದೀರಲ್ಲಾ ನಿಮಗೆ ನಾಚಿಕೆ ಆಗಲ್ವಾ? ಅನುದಾನ ಮೀಸಲಿಡದೆ ಯೋಜನೆ ಘೊಷಣೆ ಮಾಡಿ ಅದರಲ್ಲೂ 40% ಕಮಿಷನ್ ಹೊಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ 12 ಹಣಕಾಸು ಮಂತ್ರಿ, 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಆದರೆ ಹಣ ಮೀಸಲಿಡದೆ ಯೋಜನೆ ಘೊಷಣೆ ಮಾಡಿದ್ದು ಯಾವತ್ತೂ ಕಂಡಿಲ್ಲ. ಇದೇ ಕಾರಣಕ್ಕೆ ನಾವು ಬಿಜೆಪಿಯವರೇ ನಿಮ್ಮ ಬಳಿ ಉತ್ತರ ಇದೆಯಾ ಎಂಬ ಅಭಿಯಾನ ಆರಂಭ ಮಾಡಿದ್ದೇವೆ.
ಮಾತೆತ್ತಿದ್ದರೆ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರನಾ ಎನ್ನುತ್ತಾರೆ. ಸರಿ ನಮ್ಮ ಕಾಲದಲ್ಲೂ ಹಗರಣ ನಡೆದಿದ್ದರೆ ಅದನ್ನೂ ಸೇರಿಸಿ ತನಿಖೆ ಮಾಡಿಸಿ. ಈ ಸರ್ಕಾರದ ಮೇಲಿನ ತಮ್ಮ ಆರೋಪವನ್ನು ಸಾಬೀತು ಮಾಡಲು ಆಗದಿದ್ದರೆ ಯಾವುದೇ ಕಾನೂನು ರೀತ್ಯಾ ಶಿಕ್ಷೆ ಎದುರಿಸಲು ತಾವು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ, ಸರ್ಕಾರ ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ. ಯಾಕೆ ಭಯ? ನಮ್ಮ ಸರ್ಕಾರದ ಅವಧಿಯಲ್ಲಿ 5 ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೆವು. ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು, ಆದರೂ ನಾವು ಅಂಜಿರಲಿಲ್ಲ ಕಾರಣ ನಾವು ತಪ್ಪು ಮಾಡಿರಲಿಲ್ಲ. ನೀವು ತಪ್ಪು ಮಾಡಿಲ್ಲ ಎಂದರೆ ತನಿಖೆ ಮಾಡಿಸಿ.
ಬಿಜೆಪಿಯವರಿಗೆ ಮಾನ ಮರ್ಯಾದಿ ಇಲ್ಲ ಬಿಡಿ, ತಮ್ಮ ಜೊತೆ ರಾಜ್ಯದ ಮರ್ಯಾದಿಯನ್ನು ಹಾಳು ಮಾಡುತ್ತಿದ್ದಾರೆ. ಉದಾಹರಣೆಗೆ ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿದ್ದರು. ಆದರೆ ಈಗ ಎಡಿಜಿಪಿ ಜೈಲು ಸೇರಿದ್ದಾರೆ. 1 ಲಕ್ಷದ 29,000 ಜನ ಪರೀಕ್ಷೆ ಎದುರಿಸಿದ್ದರು. ಇವರಲ್ಲಿ ಕೆಲವರ ಉತ್ತರ ಪತ್ರಿಕೆಗಳನ್ನು ತಿದ್ದಿದ್ದಾರೆ, ಸರ್ಕಾರದ ಕುಮ್ಮಕ್ಕಿಲ್ಲದೆ ಇದು ಸಾಧ್ಯವೇ? ಕೆಪಿಟಿಸಿಎಲ್ ನಲ್ಲಿ 3.50 ಲಕ್ಷ ಜನ ಪರೀಕ್ಷೆ ಎದುರಿಸಿದ್ದರು, ಅಲ್ಲೂ ದೊಡ್ಡ ಹಗರಣ ನಡೆದಿದೆ. ಈ ಬಸವರಾಜ ಬೊಮ್ಮಾಯಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ಇದೇ ಕಾರಣಕ್ಕಾಗಿ ಬಿಜೆಪಿಯ ಹಿರಿಯ ನಾಯಕ ಮಾಧುಸ್ವಾಮಿ ಅವರು ಇಲ್ಲಿ ಸರ್ಕಾರ ಇಲ್ಲ, ಕೇವಲ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈಗಲೂ ತಮ್ಮ ಮಾತನ್ನು ಅವರು ತಪ್ಪು ಎಂದು ಒಪ್ಪಿಕೊಂಡಿಲ್ಲ, ಅಂದರೆ ಹೇಳಿದ್ದು ಸರಿ ಇದೆ ಅಂದಹಾಗೆ ತಾನೇ?
ಇಂಥಾ ಭ್ರಷ್ಟ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂಡಿಟ್ಟು ನಿಮ್ಮ ಬಳಿ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಎಸ್.ಟಿ ಸಮುದಾಯಕ್ಕೆ 7.5 ಮೀಸಲಾತಿ ನೀಡಬೇಕೆಂಬ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದು ಕೊಡುತ್ತೇವೆಂದು ಶ್ರೀರಾಮುಲು ಹೇಳಿದ್ದರು. ಏನಾಗಿದೆ ಈಗ? ಕೊಟ್ಟ ಮಾತಿನಂತೆ ನಡೆದುಕೊಂಡರಾ? ಈ ಬಿಜೆಪಿಯವರು ಮಾತೆತ್ತಿದ್ದರೆ ರಕ್ತದಲ್ಲಿ ಬರೆದುಕೊಡ್ತೀನಿ ಎನ್ನುತ್ತಾರೆ. ಇವರ ಮೈಯಲ್ಲಿ ರಕ್ತ ಇದೆಯಾ ಅನ್ನೋದೆ ಅನುಮಾನ.
ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ಧರ್ಮ, ಆಹಾರದ ವಿಚಾರಗಳನ್ನು ಮುಂದೆ ತರುತ್ತಾರೆ. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಎನ್ನುತ್ತಾರೆ. ಇಂಥಾ ಅನಗತ್ಯ ವಿಚಾರಗಳನ್ನು ಜನರ ಮುಂದಿಟ್ಟು ಅವರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಪಕ್ಷ ಅಧಿಕಾರದಿಂದ ತೊಲಗಬೇಕು.
ಹೀಗಾಗಿ ನಾವು ಸತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನೆಗಳನ್ನು ಎತ್ತಿ ಬಿಜೆಪಿ ಅವರಿಂದ ಉತ್ತರ ಕೇಳಿದ್ದೇವೆ. ಅವರ ಬಳಿ ಉತ್ತರ ಇದ್ದರೆ ನೀಡಲಿ.