ಮೇಲುಕೋಟೆ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವರ ದರ್ಶನ ಪಡೆಯಲು ತೆರಳುವ ಭಕ್ತಾಧಿಗಳಿಗೆ ಸಿಹಿ ಸುದ್ದಿ. ಬೆಂಗಳೂರಿನಿಂದ ಮೇಲುಕೋಟೆಗೆ ಪ್ರತಿದಿನ 2 ಬಸ್ಸು ಪ್ರಯಾಣ ಉಚಿತ ಆರಂಭಿಸಲಾಗಿದೆ.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರ ಸಲಹೆ ಮೇರೆಗೆ ಬೆಂಗಳೂರಿನ ಅರಮನೆ ಸೇವಾ ಪ್ರತಿಷ್ಠಾನ ಮತ್ತು ರಾಜು ಎಂಟರ್ ಪ್ರೈಸಸ್ನಿಂದ ಅರಮನೆ ಶಂಕರ್ ಭಕ್ತರಿಗೆ ಕಲ್ಪಿಸಿರುವ ಉಚಿತ ಬಸ್ ಸೌಲಭ್ಯವನ್ನು ಭಾನುವಾರ ಆರಂಭಿಸಲಾಗಿದೆ.
ಬೆಂಗಳೂರಿನ ಶ್ರೀನಗರದಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊರಡುವ ಒಂದು ಬಸ್ ಬೆಳ್ಳೂರು ಕ್ರಾಸ್, ನಾಗಮಂಗಲ ಮಾರ್ಗವಾಗಿ ಮೇಲುಕೋಟೆಗೆ ಪೂರ್ವಾಹ್ನ 11 ಗಂಟೆಗೆ ತಲುಪಲಿದೆ.
ಭಕ್ತರು ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದರ್ಶನ ಪಡೆದು ಬಸ್ಗೆ ಮರಳಲು 3 ಗಂಟೆಗಳ ಕಾಲ ಅವಕಾಶ ನೀಡಲಾಗಿದ್ದು, ಮೇಲುಕೋಟೆಯಿಂದ ಮಧ್ಯಾಹ್ನ 3ಕ್ಕೆ ಹೊರಡುವ ಬಸ್ ಅದೇ ಮಾರ್ಗದಲ್ಲಿ ಸಂಚರಿಸಿ ರಾತ್ರಿ 7ಕ್ಕೆ ಶ್ರೀನಗರ ತಲುಪಲಿದೆ.
ಮತ್ತೊಂದು ಬಸ್ ರಾಮನಗರ, ಮಂಡ್ಯ, ಶಿವಳ್ಳಿ, ಜಕ್ಕನಹಳ್ಳಿ ಮಾರ್ಗವಾಗಿ ಪೂರ್ವಾಹ್ನ 11.30ಕ್ಕೆ ಮೇಲುಕೋಟೆ ತಲುಪಲಿದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ಇದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಡಲಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಿಂದ ನಾಗಮಂಗಲ ಹಾಗೂ ನಾಗಮಂಗಲದಿಂದ ಬೆಂಗಳೂರಿಗೆ ಉಚಿತ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಿಂದ ಮೇಲುಕೋಟೆಗೆ ತೆರಳುವ ಭಕ್ತರಿಗೆ ಬಸ್ಸಿನ ಅನುಕೂಲವಾಗಲಿದೆ ಎಂದರೆ ತಪ್ಪಾಗಲಾರದು