ಹಾವೇರಿ : ಕೃಷಿ ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಣೇಬೆನ್ನೂರು ವಿಧಾನಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುರ್ಸತಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಕೃಷಿ ಕೂಲಿಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆಂದು ಅವರಿಗೆ ವಿಶೇಷವಾದ 4 ಸಾವಿರ ಅಂಗನವಾಡಿಗಳನ್ನು ಪ್ರಾರಂಭ ಮಾಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಕರಕುಶಲಕಾರ್ಮಿಕರಿಗೆ 50 ಸಾವಿರ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದರು.
ನುಡಿದಂತೆ ನಡೆದಿದ್ದೇವೆ
ಚುನಾವಣೆಯ ಸಂದರ್ಭದಲ್ಲಿ ನಾವು ನೀಡಿದ ಮಾತಿನಂತೆ ಕೆಲಸ ಮಾಡುತ್ತಿದ್ದೇವೆ. 24/7 ಕುಡಿಯುವ ನೀರಿನ್ನು ನೀಡುವುದಾಗಿ ವಾಗ್ದಾನ ಮಾಡಿದಂತೆ ರಾಣೆಬೆನ್ನೂರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ 2 ಮೆಡ್ಲೇರಿ ಮತ್ತು ಹೊಳೆಅನವೇರಿ ನೀರಾವರಿಗಳಿಗೆ ಮಂಜೂರಾತಿ ನೀಡಿ ಕೆಲಸ ಪ್ರಾರಂಭವಾಗಿದೆ. 206 ಕೋಟಿ ರೂ.ಗಳ ವೆಚ್ಚದಲ್ಲಿ ಅದನ್ನು ಮಂಜೂರು ಮಾಡಲಾಗಿದೆ. 45 ಕೋಟಿ ರೂ.ಗಳನ್ನು ರಾಣೇಬೆನ್ನೂರಿಗೆ ನಗರೋತ್ಥಾನದಲ್ಲಿ ನೀಡಲಾಗಿದೆ. ಹಿಂದೆಂದೂ ಇಷ್ಟು ದೊಡ್ಡ ಮೊತ್ತ ಬಂದಿರಲಿಲ್ಲ. 75-100 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡಲಾಗಿದೆ. ಬಜೆಟ್ ನಲ್ಲಿ ಘೋಷಿಸಿದಂತೆ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದೆ. 5 ಸಾವಿರ ಯುವಕ ಯುವತಿಯವರಿಗೆ ಉದ್ಯೋಗ ನೀಡುವ ಜವಳಿ ಪಾರ್ಕ್ ಇದೇ ವರ್ಷ ಪ್ರಾರಂಭವಾಗುತ್ತಿದೆ ಎಂದರು.
ನೇಕಾರರಿಗೆ ವಿಶೇಷ ಕಾರ್ಯಕ್ರಮ
ಈ ಭಾಗದ ನೇಕಾರರಿಗೆ ವಿಶೇಷ ನೇಕಾರರಿಗೆ ಕೈಮಗ್ಗ ಮತ್ತು ಪವರ್ ಲೂಮ್ಗಳಿಗೆ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ರೈತರು ಇಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಅದಕ್ಕಾಗಿ 30 ಕೋಟಿ ರೂ.ಗಳ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಯನ್ನು ಮಂಜೂರು ಮಾಡಿದೆ. ಗ್ರಾಮೀಣ ಪ್ರದೇಶದ ರಸ್ತೆಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಮಾಡುತ್ತಿದ್ದೇವೆ. ಕಳೆದ ವರ್ಷ ಅಂಗನವಾಡಿಗಳಗೆ 1 ಲಕ್ಷ ರೂ.ಗಳನ್ನು ನೀಡಿದ್ದು, ಸ್ತ್ರೀಶಕ್ತಿ ಸಂಘಗಳಿಗೆ ಅಮೃತ ಯೋಜನೆಯಲ್ಲಿ ಕನಿಷ್ಠ 50-60 ತಲಾ ಸಂಘಗಳಿಗೆ 1 ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಈ ವರ್ಷ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ರಾಣೇಬೆನ್ನೂರಿನ ಎಲ್ಲಾ ಗ್ರಾಮದ ಸ್ತ್ರೀ ಶಕ್ತಿ ಸಂಘಗಳಿಗೆ 10 ಲಕ್ಷ ರೂ.ಗಳನ್ನು ಒದಗಿಸುವ ಯೋಜನೆ ಹಮ್ಮಿಕೊಂಡಿದೆ. ರಾಜ್ಯದ 33 ಸಾವಿರ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೂ ಇದನ್ನು ವಿಸ್ತರಿಸಲಾಗಿದೆ. ಸ್ತ್ರೀಯರ ಸಾಮರ್ಥ್ಯ ರಾಜ್ಯ ಕಟ್ಟಲು ಬಳಕೆಯಾಗಬೇಕು. ಕುಟುಂಬಗಳೂ ಉದ್ಧಾರವಾಗಬೇಕು. ಕುಟುಂದ ಜೀವನಮಟ್ಟ ಹೆಚ್ಚಬೇಕು. ಅವರ ಆದಾಯ ಹೆಚ್ಚಾದರೆ, ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಆರ್ಥಿಕತೆ ಎಂದರೆ ದುಡಿಮೆ. ದುಡಿಮೆಗೆ ನಮ್ಮ ಸರ್ಕಾರ ಮಹತ್ವ ನೀಡಿದೆ.
ಹಾವೇರಿ ಜಿಲ್ಲೆಯ ಏತನೀರಾವರಿ ಯೋಜನೆಗಳ ಲೋಕಾರ್ಪಣೆ
ಹಾವೇರಿ ಜಿಲ್ಲೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ 400 ಕೋಟಿ ರೂ. ಮಂಜೂರು ಮಾಡಿ, ಜನವರಿ ತಿಂಗಳಲ್ಲಿ ಮೊದಲ ಹಂತದ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದೆ. ಹಾವೇರಿ ಜಿಲ್ಲೆಗೆ ನೀರಾವರಿ ಯೋಜನೆಯಡಿಯಲ್ಲಿ ಹಾವೇರಿ, ರಾಣಿಬೆನ್ನೂರು, ಹಾನಗಲ್ ಸೇರಿದಂತೆ 1 ಲಕ್ಷ ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ನಮ್ಮ ಸರ್ಕಾರದ ಬದ್ಧತೆಯನ್ನು ತೋರುತ್ತದೆ. ರಾಣಿಬೆನ್ನೂರಿನಲ್ಲಿ ಮೆಡ್ಲೇರಿ,ಹೊಳೆಆನವೇರಿ ಏತನೀರಾವರಿ, ಹಾನಗಲ್ ಬಾಳಬೀಡ,ಸಮಸ್ಗಿ ಏತನೀರಾವರಿ 117 ಕೋಟಿ ರೂ., ಹಾವನೂರು,ಬುಡಪನಲ್ಲಿ ಏತನೀರಾವರಿ ಬ್ಯಾಡಗಿಯಲ್ಲಿ, ಸರ್ವಜ್ಞ ಏತನೀರಾವರಿ ಹಿರೇಕೆರೂರಿನಲ್ಲಿ, ಹೀಗೆ ಏತನೀರಾವರಿ ಯೋಜನೆಗಳನ್ನು ಸಧ್ಯದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದರು.
ಹಾವೇರಿ ಕೈಗಾರಿಕಾ ಟೌನ್ಶಿಪ್- 15 ಸಾವಿರ ಉದ್ಯೋಗಾವಕಾಶ
100 ಕೋಟಿ ರೂ. ವೆಚ್ಚಲ್ಲಿ ಮೆಗಾ ಡೈರಿ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ. ಹಾವೇರಿಯಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಯೂಎಸ್ಡಿ ಪ್ಲಾಂಟ್, 50 ಸಾವಿರ ಲೀ. ಹಾಲಿನ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಹಾಲು ಒಕ್ಕೂಟ ರಚನೆಯಾದ ನಂತರ 1.80 ಲಕ್ಷ ಲೀ. ಹಾಲು ಉತ್ಪಾದನೆಯಾಗಿದೆ. ರೈತರ ಕೈಗೆ ಆದಾಯ ಹೆಚ್ಚಿಸಬೇಕೆಂದು ಈ ಯೋಜನೆ ತರಲಾಗಿದೆ. ಹಾವೇರಿ ರಾಣಿಬೆನ್ನೂರು ನಡುವೆ 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಟೌನ್ಶಿಪ್ ಸ್ಥಾಪಿಸಲಾಗುವುದು. 15 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು.
ರಾಣಿಬೆನ್ನೂರಿನಲ್ಲಿ ಬೃಹತ್ ಹೆಬ್ಬಾಗಿಲು ನಿರ್ಮಾಣ
ಹಾವೇರಿ ಜಿಲ್ಲೆ ರಚನೆಯಾಗಿ 25 ವರ್ಷಗಳು ಸಂದಿದ್ದು, ನವೆಂಬರ್ ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಸಮ್ಮೇಳನದ ಸವಿನೆನಪಿಗಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣಿಬೆನ್ನೂರಿನಲ್ಲಿ ಬೃಹತ್ ಹೆಬ್ಬಾಗಿಲು ನಿರ್ಮಿಸಲು 5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.
ನವಭಾರತ ನಿರ್ಮಾಣಕ್ಕೆ ಕರ್ನಾಟಕದ ಕೊಡುಗೆ
ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಅವಕಾಶವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿದೆ. ಕರ್ನಾಟಕದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ದೊಡ್ಡ ಬದಲಾವಣೆಯನ್ನು ತರಲಾಗುತ್ತಿದೆ. ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿಗಳ ನಿರ್ಮಾಣ, ಪಿಹೆಚ್ಸಿ ಕೇಂದ್ರಗಳ ಉನ್ನತೀಕರಣ, ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣಕ್ಕೆ , ಪ್ರಧಾನಿಯವರ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ , ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕರ್ನಾಟಕ ಕೊಡುಗೆ ನೀಡಲಿದೆ ಎಂದರು.