ಹೊಸದಿಲ್ಲಿ: ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಹತ್ತು ವರ್ಷಗಳ ಅವಧಿಯಲ್ಲಿ ಕಡಿಮೆಯಾಗಿದೆ. ಹೀಗೆಂದು ಅಮೆರಿಕದ ಸಂಶೋಧನಾ ಸಂಸ್ಥೆ “ಪ್ಯೂ ರಿಸರ್ಚ್’ ನಡೆಸಿದ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಹೆಣ್ಣು ಭ್ರೂಣ ಪರೀಕ್ಷೆ ನಡೆಸುವ ಪದ್ಧತಿ ತಡೆಯಲು ಕಠಿಣ ಕ್ರಮ ಸೇರಿದಂತೆ ಭಾರತ ಸರಕಾರ ಕ್ರಮ ಕೈಗೊಂಡಿತ್ತು. ಅದರಿಂದಾಗಿ ಭ್ರೂಣ ಹತ್ಯೆ ಪ್ರಮಾಣದಲ್ಲಿ ಇಳಿಕೆ ಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಧಾರ್ಮಿಕ ಗುಂಪುಗಳಲ್ಲಿ ಇರುವ ಲಿಂಗಾನು ಪಾತವೂ ಗಣನೀಯವಾಗಿ ತಗ್ಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ. 2001ರ ಜನಗಣತಿ ಪ್ರಕಾರ ಸಿಖ್ ಧರ್ಮದಲ್ಲಿ 130 ಬಾಲಕರಿಗೆ 100 ಬಾಲಕಿಯರಿದ್ದರು. ಆದರೆ ಇದೀಗ ಅದು 110 ಬಾಲಕರಿಗೆ 100 ಬಾಲಕಿ ಯರ ಅನುಪಾತಕ್ಕೆ ಬಂದಿದೆ ಎಂದು ವರದಿ ಹೇಳಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯನ್ನು ಆಧರಿಸಿ ಪ್ಯೂ ವರದಿ ಸಿದ್ಧಪಡಿಸಿದೆ. ಅದರ ಪ್ರಕಾರ 2011ರ ಜನಗಣತಿಯಲ್ಲಿ ದೇಶದಲ್ಲಿ 111 ಬಾಲಕರಿಗೆ 100 ಬಾಲಕಿಯರ ಅನುಪಾತವಿತ್ತು. 2000ದಿಂದ 2019ರವರೆಗೆ ಒಟ್ಟು ಕನಿಷ್ಠ 90 ಲಕ್ಷ ಹೆಣ್ಣು ಭ್ರೂಣಗಳ ಹತ್ಯೆಯಾಗಿದೆ. ಅದರಲ್ಲಿ 2010ರಲ್ಲಿ 4.8 ಲಕ್ಷ ಹೆಣ್ಣು ಭ್ರೂಣ ಹತ್ಯೆಯಾಗಿದ್ದರೆ, 2019ರಲ್ಲಿ ಅದು 4.1 ಲಕ್ಷಕ್ಕೆ ಇಳಿದಿದೆ.