ಬೆಂಗಳೂರು : ಗ್ರಾಮೀಣ ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಾದ್ಯಂತ ಹೆಚ್ಚು ಒತ್ತಡ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ವೈದ್ಯರ ಸಂಖ್ಯೆ ಹೆಚ್ಚಳ ಮಾಡುತ್ತಿದ್ದು, ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, 2.2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, 6 ಹಾಸಿಗೆ ಸಾಮರ್ಥ್ಯದ ಚಿಕಿತ್ಸಾಕೇಂದ್ರ ಇದಾಗಿದೆ. ಇದಕ್ಕೆ ಈಗ ಇರುವ ಒಬ್ಬ ವೈದ್ಯರ ಜೊತೆಗೆ ಮತ್ತೊ ವೈದ್ಯರನ್ನು ನೇಮಿಸಲಾಗುವುದು ಎಂದರು.
ಜನರಿಗೆ ಆರೋಗ್ಯ ಏರುಪೇರಾದರೆ ಏನೇ ಇದ್ದರೂ ಉಪಯೋಗವಿಲ್ಲ, ಹಾಗಾಗಿಯೇ ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎಲ್ಲ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅಲ್ಲದೆ ಹಾಸಿಗೆಗಳ ಸಾಮರ್ಥ್ಯ, ಮುಖ್ಯವಾಗಿ ಆಮ್ಲಜನಿಕ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದು ವಿವರಿಸಿದರು.
BIGG NEWS : ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ ನಾಲ್ಕು ದಿನ ನಿಷೇಧಾಜ್ಞೆ : ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಆದೇಶ
ಕಳೆದ 70 ವರ್ಷಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷದಲ್ಲಿ ಆರೋಗ್ಯ ಇಲಾಖೆಯ ಮೂಲ ಸೌಲಭ್ಯಗಳನ್ನು 6 ಪಟ್ಟು ಹೆಚ್ಚಳ ಮಾಡಲಾಗಿದೆ, ವೈದ್ಯರ ನೇಮಕವೂ ನಡೆಯುತ್ತಿದ್ದು, ಈ ವರ್ಷ 4,300ಕ್ಕೂ ಹೆಚ್ಚು ವೈದ್ಯರನ್ನು ಅಧಿಕವಾಗಿ ನಿಯೋಜನೆ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ಕಾಲೇಜಿನವರೆಗೂ ವೈದ್ಯರನ್ನು ನೇಮಿಸಲಾಗುವುದು. ವೈದ್ಯರ ಕೌನ್ಸಲಿಂಗ್ ಈ ವಾರದಲ್ಲಿ ಮುಗಿಯಲಿದ್ದು, ಅವರ ಕಾರ್ಯಕ್ಷೇತ್ರಕ್ಕೆ ಹೋಗಲಿದ್ದಾರೆ ಎಂದು ಸಚಿವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಪ್ರಮುಖವಾಗಿದ್ದು, ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತದೆ. ಅನೇಕ ರೋಗಗಳು ಬಾರದಂತೆ ತಡರಯಲು ಮುನ್ನೆಚ್ಚರಿಕಾ ಕ್ರಮಗಳಿಂದ ಸಾಧ್ಯವಿದೆ, ಸೇವಿಸುವ ಆಹಾರ, ದಿನನಿತ್ಯದ ಚಟುವಟಿಕೆಗಳು, ಯೋಗ, ಧ್ಯಾನಗಳಿಂದ ರೋಗಗಳನ್ನು ದೂರ ಇಡಲು ಸಾಧ್ಯವಿದೆ. ಹಾಗಾಗಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಪ್ರಸ್ತುತ ಆರಂಭವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಉತ್ತಮವಾಗಿ ನಡೆಯಬೇಕು, ಇದರ ಸದ್ಬಳಕೆಯಾಗಬೇಕು, ಕಾಮಗಾರಿಯಲ್ಲಿ ಲೋಪದೋಷ ಆಗಬಾರದು, ಗುಣಮಟ್ಟ ಕಾಯ್ದುಕೊಳ್ಳಬೇಕು, ಗುಣಮಟ್ಟ ಪ್ರಮಾಣಪತ್ರ ದಾಖಲಿಸಬೇಕು ಎಂದು ಸಚಿವರು ಖಡಕ್ ಆಗಿ ಹೇಳಿದರು.
ಶಾಲೆ, ಆಸ್ಪತ್ರೆಗಳು ಶಾಶ್ವತ ಕಾರ್ಯಕ್ರಮಗಳಾಗಿದ್ದು, ಇವನ್ನು ಗುತ್ತಿಗೆದಾರರಿಗೆ ಲಾಭ ತರುವ ಉದ್ಧೇಶದಿಂದಲ್ಲದೆ, ಜನರ ಹಿತಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮಗಳೆಂಬುದನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸುವಂತೆ ಸಚಿವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಪಂ ಅಧ್ಯಕ್ಷೆ ಚಂದ್ರಿಕಾ ರವಿ, ವಿಜಯೇಂದ್ರ, ತೇಜಸ್, ಗ್ರಾಪಂ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.