ಬೆಂಗಳೂರು : ರಾಜ್ಯ ಸರ್ಕಾರವು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ್ದು, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅನುಮತಿ ಪಡೆಯುವ ಸಂಬಂಧ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ವಿವಿಧ ವಾರ್ಡ್ ಮಟ್ಟದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗೊಂಡ ಏಕಗವಾಕ್ಷಿ ವ್ಯವಸ್ಥೆ ಇರಬೇಕು ಎಂದು ತಿಳಿಸಿದೆ.
ಗಣೇಶನ ಪ್ರತಿಷ್ಠಾಪನೆಗೆ ಅರ್ಜಿ ಸಲ್ಲಿಸಿದ 3 ದಿನದೊಳಗೆ ಪರವಾನಗಿ ನೀಡಬೇಕು. ಸರ್ಕಾರ ನೀಡಿರುವ ಸೂಚನೆ ಪಾಲಿಸುವ ಬಗ್ಗೆ ಆಯೋಜಕರಿಂದ ಮುಚ್ಚಳಿಕೆ ಪಡೆಯಬೇಕು ಎಂಬ ಅಂಶಗಳು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಗಣೇಶನ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಮತ್ತಿತರ ಪರವಾನಗಿ ಪಡೆಯಲು ಕಂದಾಯ, ಲೋಕಪಯೋಗಿ, ಇಂಧನ, ಅಗ್ನಿಶಾಮಕ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು ಎಂದು ತಿಳಿಸಿದೆ.