ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಕ್ಯಾಬಿನೆಟ್ ಸಚಿವ ಸತ್ಯೇಂದರ್ ಜೈನ್ ಅವರ ಪತ್ನಿ ಪೂನಂ ಜೈನ್ʼಗೆ ದೆಹಲಿ ನ್ಯಾಯಾಲಯ ನಿಯಮಿತ ಜಾಮೀನು ನೀಡಿದೆ. ಅಂದ್ಹಾಗೆ, ಇದೇ ಪ್ರಕರಣದಲ್ಲಿಯೇ ಪೂನಂ ಜೈನ್ʼಗೆ ಈ ಹಿಂದೆ ಮಧ್ಯಂತರ ಜಾಮೀನು ನೀಡಲಾಗಿತ್ತು.
ಪೂನಂ ಜೈನ್ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ನಿಯಮಿತ ಜಾಮೀನು ಪಡೆದಿದ್ದಾರೆ. ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರ ವಿಚಾರಣೆ ಆಗಸ್ಟ್ 27ರಂದು ನಡೆಯಲಿದೆ. ಆದಾಗ್ಯೂ, ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿಲ್ಲ. ಸತ್ಯೇಂದ್ರ ಜೈನ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ವಿಸ್ತರಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದರ್ ಜೈನ್ ಅವರನ್ನು “ಮಾನಸಿಕ ಅಸ್ವಸ್ಥ” ಎಂದು ಘೋಷಿಸಲು ಮತ್ತು ಅವರನ್ನ ಶಾಸಕ ಮತ್ತು ಸಚಿವ ಸ್ಥಾನದಿಂದ ಅನರ್ಹಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.