ಪುತ್ತೂರು : ಸಂಚಾರ ಮಾಡುವಾಗ ಅದೆಷ್ಟೋ ಜನರು ಸರ್ಕಾರಿ ಬಸ್ಸು ಸಂಚಾರ ಸೇಫ್ ಅನ್ನೋರೇ ಜಾಸ್ತಿ. ಆದರೇ ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿ ಬಾವಿಯಂತೆ ಆಗುತ್ತಿದ್ದಂತೆ ದುರಂತಗಳು ಹೆಚ್ಚಾಗಿದೆ. ಅದರಲ್ಲೂ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ರಸ್ತೆ ಗುಂಡಿಯಿಂದ ಸರ್ಕಾರಿ ಬಸ್ಸಿನಲ್ಲಿ ಹಿಂಬದಿ ಸೀಟ್ನಲ್ಲಿ ಕುಳಿತ್ತಿದ್ದ ಯುವಕನ ಸುಂಟಕ್ಕೆ ಗಂಭೀರ ಗಾಯಗೊಂಡು ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡ ದುರಂತ ಘಟನೆ ಬೆಳಕಿಗೆ ಬಂದಿದೆ.
ಬೆಳ್ಳಾರೆಯ ತಡೆಗಜೆ ವಿಜಯ ಕುಮಾರ್ ಎಂಬವರು ಸುಳ್ಯದ ಮೊಬೈಲ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಕಾರ್ಯ ನಿಮಿತ್ತ ಮಂಗಳೂರಿಗೆ ಹೋಗಿ ಮರಳಿ ಬೆಳ್ಳಾರೆಗೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬರುತ್ತಿದ್ದರು.
ಬಸ್ ಕಲ್ಲಡ್ಕ ಬಳಿ ತಲುಪುತ್ತಿದ್ದಂತೆ ಒಮ್ಮಿಂದೊಮ್ಮೆಲೆ ರಸ್ತೆಯಲ್ಲಿದ್ದ ಹೊಂಡಕ್ಕೆ ಜಂಪ್ ಆಯಿತು. ಬಸ್ಸು ಗುಂಡಿಗೆ ಬಿದ್ದ ರಭಸಕ್ಕೆ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯ ಕುಮಾರ್ ಸೀಟಿನಿಂದ ಮೇಲಕ್ಕೆ ಎಸೆಯಲ್ಪಟ್ಟು ಬೀಳುವಾಗ ಬಸ್ಸಿನ ಸೀಟಿನ ರಾಡ್ ಸೊಂಟಕ್ಕೆ ತಾಗಿ ಗಂಭೀರ ಗಾಯಗೊಂಡು, ಸೊಂಟದಿಂದ ಕೆಳಭಾಗ ಸ್ಪರ್ಶ ಕಳೆದುಕೊಂಡು ಕಿರುಚಾಡಿದರು.
ತಕ್ಷಣ ಬಸ್ಸು ನಿಲ್ಲಿಸಿದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದ ವಿಜಯರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.
ಮೇಲಕ್ಕೆಸೆಯಲ್ಪಟ್ಟ ಸಂದರ್ಭ ವಿಜಯರವರ ತಲೆ ಬಸ್ಸಿನ ಟಾಪ್ಗೆ ತಾಗಿತ್ತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ತುಂಡಾಗಿದೆ ಎಂಬ ಮಾಹಿತಿ ತಿಳಿಸಿದ್ದಾರೆ. ಇದರಿಂದ ಸರ್ಕಾರಿ ಬಸ್ಸಿನಲ್ಲಿ ಸಂಚಾರ ಜೀವಕ್ಕೆ ಕುತ್ತು ಎದುರಾಗಬಹುದು ಎಂದರೇ ತಪ್ಪಗಲಾರದು.