ರಾಯಚೂರು: ನಕಲಿ ಕೀ ಬಳಸಿ ಮಾಲೀಕರಿಗೆ ವಂಚಿಸಿ ಲಕ್ಷಾಂತರ ರೂಪಾಯಿ ಹಣ ಕದ್ದಿದ್ದ ಚಾಲಕ ಸೇರಿ ಮೂವರನ್ನ 48 ಗಂಟೆಯಲ್ಲಿ ಬಂಧಿಸುವಲ್ಲಿ ಸಿಂಧನೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ವಾಹನ ಚಾಲಕ ಸೈಯದ್ ಜುಬೇರ್, ಚಾಲಕನ ಸಹೊದರ ಸೈಯದ್ ಕಲಂದರ್, ಚಾಲಕನ ಸ್ನೇಹಿತ ಗಣೇಶ್ ಬಂಧಿತ ಆರೋಪಿಗಳು. ಆರೋಪಿಗಳಿಂದ 46,23,360 ರೂ. ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ.
ರಾಯಚೂರು ನಗರದ ಬೀಡಿ ಕಂಪನಿಯಲ್ಲಿ ಟಾಟಾ ಟರ್ಬೋ ಕಂಟೇನರ್ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೈಯದ್ ಜುಬೇರ್ ಮಾಲೀಕರಿಗೆ ವಂಚಿಸಿ ಹಣ ದೋಚಿ ಸಿಕ್ಕಿಬಿದ್ದಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆಗಸ್ಟ್ 18 ರಂದು ರಾತ್ರಿ 8:30 ರ ಸುಮಾರಿಗೆ ಕಂಟೇನರ್ ವಾಹನದಲ್ಲಿ ಹಣ ಇಟ್ಟು ಸೇಲ್ಸ್ ಮನ್ ಹಾಗೂ ಚಾಲಕ ಊಟಕ್ಕೆ ಹೋದಾಗ ಕಳ್ಳತನವಾಗಿತ್ತು.
ಸಿಂಧನೂರು ನಗರ ಠಾಣೆಯಲ್ಲೂ ಇದೇ ರೀತಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ವಿಚಾರಣೆಯಲ್ಲಿ ಆರೋಪಿ ಚಾಲಕ ಸತ್ಯ ಬಾಯಿ ಬಿಟ್ಟಿದ್ದಾನೆ.ತನ್ನ ಸಹೋದರ ಹಾಗೂ ಸ್ನೇಹಿತನ ಜೊತೆ ಸೇರಿ ವಾಹನದ ನಕಲಿ ಕೀ ಬಳಸಿ ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿಕೊಂಡು ಹಣ ದೋಚಿರುವುದಾಗಿ ಸೈಯದ್ ಜುಬೇರ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.