ನವದೆಹಲಿ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವ್ರು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ಅವರನ್ನ ಇಂಟರ್ನೆಟ್ ಆಡಳಿತದ ಹೆಸರಾಂತ ತಜ್ಞರ ಸಮಿತಿಗೆ ಮಂಗಳವಾರ ನೇಮಿಸಿದ್ದಾರೆ.
ಇಂಟರ್ನೆಟ್ ಪ್ರವರ್ತಕ ವಿಂಟ್ ಸೆರ್ಫ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪತ್ರಕರ್ತೆ ಮರಿಯಾ ರೀಸಾ ಅವರನ್ನು 10 ಸದಸ್ಯರ ಇಂಟರ್ನೆಟ್ ಆಡಳಿತ ವೇದಿಕೆ (ಐಜಿಎಫ್) ನಾಯಕತ್ವ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.
ಇದಲ್ಲದೇ, ತಂತ್ರಜ್ಞಾನದ ಬಗ್ಗೆ ಗುಟೆರಸ್ ಅವ್ರ ರಾಯಭಾರಿ ಅಮನ್ದೀಪ್ ಸಿಂಗ್ ಗಿಲ್ ಕೂಡ ಸಮಿತಿಯಲ್ಲಿದ್ದಾರೆ. ಐಜಿಎಫ್ʼನ ಆದೇಶ ಮತ್ತು ಗುಟೆರಸ್ ಅವ್ರ ಡಿಜಿಟಲ್ ಸಹಕಾರ ಮಾರ್ಗಸೂಚಿಯಲ್ಲಿನ ಶಿಫಾರಸುಗಳ ಅಡಿಯಲ್ಲಿ ಸಮಿತಿಯನ್ನ ರಚಿಸಲಾಗಿದೆ.
ಅಂತರ್ಜಾಲದ “ಕಾರ್ಯತಂತ್ರದ ಮತ್ತು ತುರ್ತು ಸಮಸ್ಯೆಗಳನ್ನು” ನಿಭಾಯಿಸುವುದು ಮತ್ತು ಐಜಿಎಫ್ʼಗೆ ಕಾರ್ಯತಂತ್ರದ ಸಲಹೆಗಳನ್ನ ಒದಗಿಸುವುದು ಸಮಿತಿಯ ಪಾತ್ರವಾಗಿದೆ.
ಅಂದ್ಹಾಗೆ, ಶರ್ಮಾ ಕೇರಳ ಕೇಡರ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದಾರೆ. ಕ್ಯಾಬಿನೆಟ್ ಸಚಿವಾಲಯದ ಮಾಜಿ ಕಾರ್ಯದರ್ಶಿಯಾಗಿರುವ ಅವರು, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯ ರಾಷ್ಟ್ರೀಯ ಯೋಜನಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.