ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನ ಮುಂಬೈ ಪೊಲೀಸರು ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಜಲ್ ಎಂದು ಗುರುತಿಸಲಾದ ವ್ಯಕ್ತಿ ಇಂದು ಬೆಳಿಗ್ಗೆ ಮುಂಬೈನ ಗಿರ್ಗಾಂವ್ನಲ್ಲಿರುವ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಲ್ಯಾಂಡ್ಲೈನ್ ಸಂಖ್ಯೆಗೆ ಮೂರ್ನಾಲ್ಕು ಬಾರಿ ಬೆದರಿಕೆ ಕರೆಗಳನ್ನ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಕರೆಗಳನ್ನ ಮಾಡಿದ ಫೋನ್ ಸಂಖ್ಯೆಯನ್ನ ಪೊಲೀಸರು ಗುರುತಿಸಿದ ನಂತ್ರ ಶಂಕಿತನನ್ನ ಪತ್ತೆಹಚ್ಚಲಾಯಿತು.
ಕರೆ ಮಾಡಿದ ವ್ಯಕ್ತಿ ಮಾನಸಿಕವಾಗಿ ಅಸ್ಥಿರನಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಆ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಂದ್ಹಾಗೆ, ಕಳೆದ ತಿಂಗಳು, ಮುಂಬೈನಲ್ಲಿರುವ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವು ಕೇಂದ್ರ ಸರ್ಕಾರವು ಒದಗಿಸಿರುವ ಭದ್ರತೆಯನ್ನ ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.