ದೆಹಲಿ : ಇಂದು ದೆಹಲಿಯ ತಮ್ಮ ನಿವಾಸದಲ್ಲಿ ಕಾಮನ್ವೆಲ್ತ್ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ ʻ ನಿಮ್ಮೊಂದಿಗೆ ನಾನು ಮಾತನಾಡುತ್ತಿರುವುದು ಇತರೆ ಎಲ್ಲ ಭಾರತೀಯರಂತೆಯೇ ನನಗೂ ಹೆಮ್ಮೆಯ ಸಂಗತಿ ಎಂದು ಸಂತಸ ಪಟ್ಟಿದ್ದಾರೆ.
ನನ್ನ ಕುಟುಂಬದ ಸದಸ್ಯರಂತೆ ನಿಮ್ಮ ಅಮೂಲ್ಯವಾದ ಸಮಯವನ್ನು ಹೊಂದಿಸಿಕೊಂಡು ನೀವೆಲ್ಲ ನನ್ನನ್ನು ಭೇಟಿಯಾಗಲು ಬಂದಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆʼ ಎಂದರು.
ಕಾಮನ್ವೆಲ್ತ್ ಕ್ರೀಡಾಪಟುಗಳಾದ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು. ದೇಶವು ಯಶಸ್ವಿಯಾಗಿ ಚೆಸ್ ಒಲಿಂಪಿಯಾಡ್ ಆತಿಥ್ಯ ವಹಿಸಿದ್ದು ಮಾತ್ರವಲ್ಲದೆ ಚೆಸ್ನಲ್ಲಿ ತನ್ನ ಶ್ರೀಮಂತ ಸಂಪ್ರದಾಯವನ್ನು ಮುಂದುವರೆಸುತ್ತಾ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ. ಚೆಸ್ ಒಲಿಂಪಿಯಾಡ್ನಲ್ಲಿ ಭಾಗವಹಿಸಿದ ಎಲ್ಲ ಆಟಗಾರರಿಗೂ ಮತ್ತು ಪದಕ ಗೆದ್ದವರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಿಮ್ಮ ಕಠಿಣ ಪರಿಶ್ರಮ ಮತ್ತು ಸ್ಪೂರ್ತಿದಾಯಕ ಸಾಧನೆಯಿಂದ ದೇಶವು ಆಜಾದಿ ಕಾ ಅಮೃತ್ ಕಾಲವನ್ನು ಪ್ರವೇಶಿಸುತ್ತಿದೆ ಎಂಬುದು ಹೆಮ್ಮೆಯ ವಿಷಯ. ಕಳೆದ ಕೆಲವು ವಾರಗಳಲ್ಲಿ ರಾಷ್ಟ್ರವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ದಾಖಲಿಸಿದೆ. ಕಾಮನ್ವೆಲ್ತ್ ಗೇಮ್ನಲ್ಲಿ ಐತಿಹಾಸಿಕ ಪ್ರದರ್ಶನದ ಜೊತೆಗೆ, ಮೊದಲ ಬಾರಿಗೆ ದೇಶವು ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಿದೆ ಎಂದು ತಿಳಿಸಿದರು.
ನೀವು ಮರಳಿ ಬಂದಾಗ ಒಟ್ಟಿಗೆ ವಿಜಯೋತ್ಸವ ಆಚರಿಸೋಣ ಎಂದು ಕಾಮನ್ವೆಲ್ತ್ ಗೇಮ್ಸ್ ಆರಂಭವಾಗುವ ಮುನ್ನವೇ ನಾನು ನಿಮಗೆ ಹೇಳಿದ್ದೆ ಮತ್ತು ಭರವಸೆಯನ್ನು ನೀಡಿದ್ದೆ. ನೀವು ಗೆಲುವಿನೊಂದಿಗೆ ಮರಳುತ್ತೀರಾ ಎಂದು ನನಗೆ ನಂಬಿಕೆ ಇತ್ತು. ನಾನು ಕಾರ್ಯನಿರತವಾಗಿದ್ದರೂ ನಿಮ್ಮನ್ನು ಭೇಟಿಯಾಗಿ ವಿಜಯೋತ್ಸವವನ್ನು ಆಚರಿಸಲು ಮೊದಲೇ ಯೋಚಿಸಿದ್ದೆ ಎಂದು ಪ್ರಧಾನಿ ಹೇಳಿದರು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 4 ಹೊಸ ಕ್ರೀಡೆಗಳಲ್ಲಿ ಗೆಲುವಿನ ಹಾದಿ ತುಳಿದಿದ್ದೇವೆ. ಲಾನ್ ಬಾಲ್ನಿಂದ ಅಥ್ಲೆಟಿಕ್ಸ್ವರೆಗೆ ಅಭೂತಪೂರ್ವ ಪ್ರದರ್ಶನವಿತ್ತು. ಇದರೊಂದಿಗೆ ಯುವಕರಲ್ಲಿ ಹೊಸ ಕ್ರೀಡೆಗಳತ್ತ ಆಸಕ್ತಿ ಹೆಚ್ಚಲಿದೆ. ಈ ಹೊಸ ಕ್ರೀಡೆಗಳಲ್ಲಿ ನಾವು ನಮ್ಮ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಬೇಕಾಗಿದೆ ಎಂದು ಪ್ರಧಾನಿ ತಿಳಿಸಿದರು.