ಬೆಂಗಳೂರು: ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ( Karnataka Lokayukta ) ಪರ್ಯಾಯವಾಗಿ ಎಸಿಬಿ ರಚಿಸಿ ಆದೇಶಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆಯನ್ನು ( ACB ) ರದ್ದು ಪಡಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯರವ ಅಡಳಿತ ಅವಧಿಯಲ್ಲಿ — ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅನ್ನು ಸ್ಥಾಪನೆ ಮಾಡಲಾಗಿತ್ತು.
ಇಂದು ಈ ಸಂಬಂಧ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರಿದ್ದಂತ ನ್ಯಾಯಪೀಠವು, ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿತು.
ಇನ್ನೂ ರಾಜ್ಯ ಸರ್ಕಾರ ಎಸಿಬಿ ರಚನೆ ಮಾಡಿ ಹೊರಡಿಸಿದ್ದಂತ ಆದೇಶವನ್ನು ರದ್ದು ಪಡಿಸಿದೆ. ಅಲ್ಲದೇ ಎಸಿಬಿಗೆ ಪೊಲೀಸ್ ಠಾಣೆ ಸ್ಥಾನ ಮಾನ ನೀಡಿದ್ದನ್ನು ಕೋರ್ಟ್ ರದ್ದುಪಡಿಸಿದೆ. ಜೊತೆಗೆ ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರಿಗೆ ಮಹತ್ವದ ಅಧಿಕಾರವನ್ನು ನೀಡಿದೆ.
ಎಸಿಬಿಯ ಎಲ್ಲಾ ಪ್ರಕರಣಗಳೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡಬೇಕು ಎಂಬುದಾಗಿಯೂ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಮತ್ತೆ ಲೋಕಾಯುಕ್ತಕ್ಕೆ ಹೊಸ ಕಳೆ ಬಂದಂತೆ ಆಗಿದೆ.
ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ
ಭ್ರಷ್ಟಾಚಾರ ನಿಗ್ರಹ ದಳವು ಒಂದು ವಿಶೇಷ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಕರ್ತವ್ಯಗಳಾಗಿವೆ. ಎ.ಸಿ.ಬಿ ಯು ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು, ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಸಾರ್ವಜನಿಕ ಸೇವಕರ ವಿರುದ್ಧ ಬಂದ ದೂರು ಅರ್ಜಿಗಳ/ನಿಖರ ಮಾಹಿತಿ ಬಗ್ಗೆ ವಿಚಾರಣೆಯನ್ನೂ ಸಹ ನಿಗ್ರಹ ದಳವು ಮಾಡುತ್ತದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016 ದಿನಾಂಕ 14.03.2016ಯಲ್ಲಿ ಸೃಜಿಸಲಾಗಿದೆ. ಈ ದಳವು ನೇರವಾಗಿ ಸಿಆಸುಇ (ಡಿ.ಪಿ.ಎ.ಆರ್)ಯ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯವರು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿರವರಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕರಿಸಲು ಐಜಿಪಿ ಹುದ್ದೆಯ ಅಧಿಕಾರಿಯವರು ಇರುತ್ತಾರೆ.
ಕೇಂದ್ರ ಸ್ಥಾನದಲ್ಲಿ ಇಬ್ಬರು ಎಸ್.ಪಿ ದರ್ಜೆಯ ಅಧಿಕಾರಿಗಳಿದ್ದು ಕ್ರಮವಾಗಿ 1] ಎಸ್.ಪಿ (ಕೇಂದ್ರ ಸ್ಥಾನ) ಹಾಗೂ 2] ಎಸ್,ಪಿ (ಆಡಳಿತ) ಎಂಬ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ 7 ವಲಯಗಳಾಗಿ ವಿಭಾಗಿಸಲಾಗಿದ್ದು ವಿವರ ಈ ಕೆಳಕಂಡಂತಿದೆ.
1] ಕೇಂದ್ರ ವಲಯ
2] ದಕ್ಷಿಣ ವಲಯ
3] ಪೂರ್ವ ವಲಯ
4] ಪಶ್ಚಿಮ ವಲಯ
5] ಉತ್ತರ ವಲಯ
6] ಈಶಾನ್ಯ ವಲಯ
7] ಬಳ್ಳಾರಿ ವಲಯ
ಪ್ರತಿ ವಲಯದಲ್ಲಿ 2 ಅಥವಾ 3 ಜಿಲ್ಲೆಗಳಿದ್ದು ಎಸ್.ಪಿ ದರ್ಜೆಯ ಅಧಿಕಾರಿ ಪ್ರತಿ ವಲಯದ ಉಸ್ತುವಾರಿಯಲ್ಲಿರುತ್ತಾರೆ. ಪ್ರತೀ ಜಿಲ್ಲೆಯಲ್ಲೂ ಎಸಿಬಿ ಠಾಣೆ ಇದ್ದು, ಡಿ.ವೈ.ಎಸ್.ಪಿ ದರ್ಜೆಯ ಅಧಿಕಾರಿಯು ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರತಿ ಎಸಿಬಿ ಠಾಣೆಯಲ್ಲಿ ಡಿ.ವೈ.ಎಸ್.ಪಿ ರವರಿಗೆ ಸಹಕರಿಸಲು ಇಬ್ಬರು ಪೊಲೀಸ್ ನಿರೀಕ್ಷಕರ ಹಾಗೂ ಇತರ ದರ್ಜೆಯ ಅಧಿಕಾರಿಗಳ ತಂಡವಿರುತ್ತದೆ. ಪೊಲೀಸ್ ನಿರೀಕ್ಷಕ ದರ್ಜೆಯ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಸಶಕ್ತರಾಗಿರುತ್ತಾರೆ.
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ತಾಂತ್ರಿಕ ಅಧಿಕಾರಿಗಳಾದ ಎಂಜಿನಿಯರುಗಳು, ತಹಶೀಲ್ದಾರರು, ಆರ್ಥಿಕ ಅಧಿಕಾರಿಗಳು ಇದ್ದು, ತಾಂತ್ರಿಕ, ಆಡಳಿತಾತ್ಮಕ ಹಾಗೂ ಆರ್ಥಿಕ ವಿಷಯಗಳ ಉಸ್ತುವಾರಿ ವಹಿಸುತ್ತಾರೆ. ಕಾನೂನಾತ್ಮಕ ಅಗತ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ದಳದಲ್ಲಿನ ಕಾನೂನು ಕೋಶವು ತನ್ನ ವಿಶೇಷ ಹಾಗೂ ಪರಿಣಿತ ಸಲಹೆ ಸೂಚನೆಗಳನ್ನು ನೀಡುತ್ತದೆ. ನ್ಯಾಯಾಲಯದಲ್ಲಿ ಪ್ರಕರಣಗಳ ಅಭಿಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸಹಕರಿಸುತ್ತದೆ.
ಸದರಿ ಭ್ರಷ್ಟಾಚಾರ ನಿಗ್ರಹ ದಳವು ಭ್ರಷ್ಟಾಚಾರ ಅಧಿನಿಯಮ 1988ರಲ್ಲಿರುವ ಅಂಶಗಳನ್ನು ಮೂಲಭೂತವಾಗಿ ಜಾರಿಮಾಡುವಲ್ಲಿ ಶ್ರಮಿಸುತ್ತದೆ. ಸ್ವ-ಇಚ್ಛೆಯಿಂದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರದತ್ತ ಅಧಿಕಾರವಿದ್ದು ಸಾರ್ವಜನಿಕ ನೌಕರರು ಪರಿಣಾಮಕಾರಿಯಾಗಿ ಹಾಗೂ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಲು ಅಗತ್ಯವೆನಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಸದರಿ ಭ್ರಷ್ಟಾಚಾರ ನಿಗ್ರಹ ದಳವು ಡಿ.ಎ, ಅಪರಾಧಿಕ ದುರ್ನಡತೆ ಹಾಗೂ ದುರುಪಯೋಗಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಮಾಡುತ್ತದೆ. ಎಫ್.ಐ.ಆರ್ ದಾಖಲಿಸುವ ಮುನ್ನ ಟ್ರ್ಯಾಪ್ ಕಾರ್ಯಾಚರಣೆಯನ್ನು ಹೊರತುಪಡಿಸಿ ಇತರ ಎಲ್ಲಾ ರೀತಿಯ ದೂರುಗಳನ್ನು ಸ್ವೀಕರಿಸುವಾಗ ಪ್ರಾಥಮಿಕ ವಿಚಾರಣೆಯನ್ನು ನಡೆಸುತ್ತದೆ. ಇದಲ್ಲದೆ ದಳವು ವಿಚಾರಣೆ, ಗೌಪ್ಯ ವಿಚಾರಣೆ ಹಾಗೂ ಅನಿರೀಕ್ಷಿತ ತಪಾಸಣೆ (ಸರ್ಪ್ರೈಸ್ ಚೆಕ್)ಗಳನ್ನೂ ಸಹ ಕೈಗೊಳ್ಳುತ್ತದೆ.
ಪ್ರಾಥಮಿಕ ವಿಚಾರಣೆಯಲ್ಲಿ ಪ್ರಕರಣ ದಾಖಲಿಸಲು ಸಾಕಷ್ಟು ಮಾಹಿತಿ/ ಸಾಕ್ಷಿಗಳಿವೆ ಎಂದು ಕಂಡುಬಂದಲ್ಲಿ ಎಫ್.ಐ.ಆರ್ ದಾಖಲಿಸಿ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆಗಳ ಆಧಾರದ ಮೇಲೆ ಆರೋಪ ಪಟ್ಟಿಯನ್ನು ದಾಖಲಿಸಲಾಗುತ್ತದೆ. ಇಲ್ಲವೇ ಸಂಬಂಧಿಸಿದ ಇಲಾಖೆಗಳಿಗೆ ಆರೋಪಿತ ಅಧಿಕಾರಿಯ ಬಗ್ಗೆ ಇಲಾಖಾ ವಿಚಾರಣೆ ಮಾಡಲು ನಿರ್ದೇಶಿಸಲಾಗುತ್ತದೆ.
ನ್ಯಾಯಾಲಯದಲ್ಲಿ ಸಾರ್ವಜನಿಕ ನೌಕರನು ದೋಷಿ ಎಂದು ಸಿದ್ಧವಾದಲ್ಲಿ ಅಂತಹ ನೌಕರನನ್ನು ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ. ಇಲಾಖಾ ವಿಚಾರಣೆಯಲ್ಲಿ ನೌಕರನ ವಿರುದ್ಧ ದೊಡ್ಡ ಶಿಕ್ಷೆ ಅಥವಾ ಅಲ್ಪ ಶಿಕ್ಷೆಯನ್ನು ಪ್ರಕರಣದ ಆಳ ಮತ್ತು ವಿಸ್ತಾರಗಳನ್ನು ಆಧರಿಸಿ ನೀಡಲಾಗುತ್ತದೆ. ದೊಡ್ಡ ಶಿಕ್ಷೆಯಲ್ಲಿ ವಜಾ, ಪದೋನ್ನತಿಯಲ್ಲಿ ಇಳಿಮುಖ, ಪದೋನ್ನತಿಯನ್ನು ತಡೆ ಹಿಡಿಯುವಿಕೆ, ವೇತನ ಹೆಚ್ಚಳಗಳನ್ನು ತಡೆಯುವುದು, ವಾಗ್ದಂಡನೆ, ಎಚ್ಚರಿಕೆ ಇತ್ಯಾದಿಗಳನ್ನು ನೀಡುವ ಕ್ರಮವಿರುತ್ತದೆ.
ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಮಾಹಿತಿ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್