ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಣ್ಣಪುಟ್ಟ ವಿಚಾರಗಳಿಗೆ ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ವಿಶ್ವದ ರಾಷ್ಟ್ರಗಳಿಗೆ ಆರ್ಥಿಕ ಮತ್ತು ವಾಣಿಜ್ಯಿಕವಾಗಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎಂದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಗೆ ಪತ್ರ ಬರೆದು ತ್ರಿಸದಸ್ಯ ಸಮಿತಿ ರಚನೆ ಮಾಡುವಂತೆ ಒತ್ತಾಯಿಸಿದ್ದು, ಈ ಮೂಲಕ ಐದು ವರ್ಷಗಳ ಕಾಲ ಯಾವುದೇ ಯುದ್ಧವಿಲ್ಲದೇ ಜಗತ್ತಿನ ದೇಶಗಳ ನಡುವೆ ಶಾಂತಿ ನೆಲೆಸಬಹುದು ಎಂದಿದ್ದಾರೆ.
ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯಾ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ತ್ರಿಸದಸ್ಯ ಸಮಿತಿಯ ಸದಸ್ಯರನ್ನಾಗಿ ನೇಮಿಸಬೇಕು ಎಂದು ಮೆಕ್ಸಿಕೊ ಅಧ್ಯಕ್ಷ ಒಬ್ರಡಾರ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮೂವರೂ ಭೇಟಿಯಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳನ್ನ ನಿಲ್ಲಿಸಿ, ಐದು ವರ್ಷಗಳ ಕಾಲ ಯಾವುದೇ ಎರಡು ದೇಶಗಳ ನಡುವೆ ಯುದ್ಧ ನಡೆಯದಂತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಯುದ್ಧದಿಂದ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮೂರು ಸದಸ್ಯರ ಸಮಿತಿಯು ಯುದ್ಧವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತದೆ ಎಂದು ಮೆಕ್ಸಿಕೊದ ಅಧ್ಯಕ್ಷ ಒಬ್ರಡಾರ್ ಹೇಳಿದ್ದು, ಐದು ವರ್ಷಗಳ ಕಾಲ ಹಿಂಸಾಚಾರವಿಲ್ಲದೆ ಶಾಂತಿಯುತವಾಗಿ ಬದುಕಲು ಜನರಿಗೆ ಸ್ವಾತಂತ್ರ್ಯವನ್ನ ನೀಡುತ್ತದೆ. ಈ ದಿಸೆಯಲ್ಲಿ ವಿಶ್ವಸಂಸ್ಥೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ವಿಶ್ವಶಾಂತಿಗಾಗಿ ತನ್ನ ಪ್ರಸ್ತಾವನೆಯನ್ನ ಚೀನಾ, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಬೆಂಬಲಿಸುತ್ತವೆ ಎಂದು ತಾವು ನಿರೀಕ್ಷಿಸಿರೋದಾಗಿ ಹೇಳಿದರು.
ದೇಶಗಳ ನಡುವಿನ ಸಂಘರ್ಷದಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಅವ್ರು, ಇದರಿಂದಾಗಿ ಜಗತ್ತು ಆರ್ಥಿಕ ಬಿಕ್ಕಟ್ಟನ್ನ ಎದುರಿಸಬೇಕಾಗುತ್ತದೆ. ಆಹಾರದ ಕೊರತೆ, ಬಡತನ ಮತ್ತು ಹಣದುಬ್ಬರದಂತಹ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇನ್ನು ಮೆಕ್ಸಿಕನ್ ಅಧ್ಯಕ್ಷ ಒಬ್ರಡಾರ್ ತನ್ನ ಪ್ರಸ್ತಾಪವನ್ನ ಬೆಂಬಲಿಸುವಂತೆ ವಿಶ್ವದ ಎಲ್ಲಾ ದೇಶಗಳನ್ನ ಒತ್ತಾಯಿಸಿದ್ದಾರೆ.