ನವದೆಹಲಿ: ಕಳೆದ ಆರು ವಾರಗಳಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೇಳೆಯ ಬೆಲೆಗಳು ಸುಮಾರು 15% ನಷ್ಟು ಹೆಚ್ಚಾಗಿದೆ. ಕಳೆದ ಆರು ವಾರಗಳ ಹಿಂದೆ ಕೆಜಿಗೆ 97 ರೂ. ಇದ್ದ ತೊಗರಿ ಬೇಳೆ ದರ ಇದೀಗ 115 ರೂ.ಗೆ ಏರಿಕೆಯಾಗಿದ್ದು, ಮೊದಲೇ ಬೇರೆ ಏರಿಕೆಯಿಂದ ಕಂಗಾಲಾಗಿರುವ ಜನತೆ ಇದು ದೊಡ್ಡ ಹೊರೆಯಾಗಲಿದೆ. ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಬಿತ್ತನೆ ಅಂಕಿಅಂಶಗಳ ಪ್ರಕಾರ, ತೊಗರಿ ಬೆಳೆಯುವ ಪ್ರದೇಶವು ಹಿಂದಿನ ವರ್ಷಕ್ಕೆ ಹೋಲಿಸಿದರೆ 4.6% ಕಡಿಮೆಯಾಗಿದೆ, ಆದರೆ ಉದ್ದಿನ ಬೇಳೆ ಬೆಳೆಯುವ ಪ್ರದೇಶವು 2% ಕಡಿಮೆಯಾಗಿದೆ ಎನ್ನಲಾಗಿದೆ.
ಪ್ರಮುಖ ತೊಗರಿ ಬೆಳೆಯುವ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಪರಿಣಾಮವಾಗಿ ನೀರು ನಿಲ್ಲುವುದು ಬೆಳೆ ಹಾನಿಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಕಡಲೆ ಮತ್ತು ಹೆಸರುಬೇಳೆ ಬೆಲೆಗಳು ಮಿತಿಮೀರಿವೆ. “ಸರ್ಕಾರವು ಕಡಲೆ ಮತ್ತು ಹೆಸರುಕಾಳು ಎರಡರ ಉತ್ತಮ ದಾಸ್ತಾನನ್ನು ಹೊಂದಿದ್ದು, ಬೆಲೆಗಳನ್ನು ನಿಯಂತ್ರಣದಲ್ಲಿಡುತ್ತಿದೆ” ಎಂದು ಬೇಳೆಕಾಳುಗಳ ಆಮದುದಾರ ವಿವೇಕ್ ಅಗರ್ವಾಲ್ ಹೇಳಿದ್ದಾರೆ.