ಬೆಂಗಳೂರು: ದುನಿಯ ವಿಜಯ್ ನಿರ್ದೇಶನದ ಸಲಗ ಸಿನಿಮಾದಲ್ಲಿ “ಟಿಣಿಂಗ್ ಮಿಣಿಂಗ್ ಟಿಶ್ಯಾ..” ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದನ್ನು ಗಿರಿಜಾ ಸಿದ್ದಿ ಗಾಯಕಿಯಿಂದ ಹಾಡಿಸಿದ್ದು, ಪಡ್ಡೆಹುಡುಗರ ಬಾಯಿಯಲ್ಲಿ ಗುನುಗುವಂತೆ ಮಾಡಿದ್ದರು.
ಯೂಟ್ಯೂಬ್ನಲ್ಲಿಯೂ ಮೆಚ್ಚುಗೆ ಪಡೆದಿದ್ದ ಈ ಹಾಡಿನಿಂದ ಗಾಯಕಿ ಗಿರಿಜಾ ಸಿದ್ದಿ ಮತ್ತವರ ತಂಡಕ್ಕೂ ಪ್ರಶಂಸೆ ಸಿಕ್ಕಿತ್ತು. ಇದೀಗ ಇದೇ ತಂಡ, ಮತ್ತೊಂದು ಹಾಡಿಗೆ ಧ್ವನಿಯಾಗಿದೆ. ವಿಶೇಷ ಏನೆಂದರೆ ಈ ಸಲ ಸಿನಿಮಾದ ಬದಲು ರಾಜಕಾರಣಿ ಸಿದ್ದರಾಮಯ್ಯ ಅವರಿಗಾಗಿ ಹಾಡಿದ್ದಾರೆ!
ಹೌದು ಹಿರಿಯ ರಾಜಕಾರಣಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೋಸ್ಕರ “ಸಲಗ” ಖ್ಯಾತಿಯ ಗಿರಿಜಾ ಸಿದ್ದಿ “ಮೈಸೂರು ಹುಲಿಯಾ..” ಎಂಬ ಹಾಡು ಹಾಡಿದ್ದಾರೆ. ಎಪ್ಪತ್ತೈದರ ವಸಂತಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಅವರಿಗಾಗಿ ಅಪರೂಪದ ಹಾಡಿಗೆ ಧ್ವನಿ ಆಗಿದ್ದಾರೆ.ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿನ ಈ ಹಾಡಿಗೆ ಗಿರಿಜಾ ಧ್ವನಿಯಾಗಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಇದು ಸಿನಿಮಾ ಶೈಲಿಯಲ್ಲಿಯೇ ಮೂಡಿಬಂದಿರುವ ಈ ಹಾಡಿನಲ್ಲಿ ಸಿದ್ದರಾಮಯ್ಯನವರ ಎಪ್ಪತ್ತೈದು ವರುಷದ ಜೀವನ ಸಾಧನೆಯನ್ನು ಕಟ್ಟಿಕೊಡಲಾಗಿದೆ. ಈ ಹಾಡಿಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. “ಕೈ ಹಿಡಿಯೋ ಕೈ ಸಿದ್ದರಾಮಯ್ಯ…” ಎನ್ನುತ್ತ ಈ ಹಾಡುನ್ನು ಬರೆದಿದ್ದು, ಎಲ್ಲರನ್ನೂ ಗಮನ ಸೆಳೆಯಲಿದೆ.