ಚಿಕ್ಕಬಳ್ಳಾಪುರ: ಜಿಲ್ಲೆಯ ಅನಂತಪುರದಲ್ಲಿ ಚಿತ್ರಾವತಿ ನದಿಯ ಅಬ್ಬರಕ್ಕೆ ಆಟೋ ಸಮೇತ ಚಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. 40 ವರ್ಷದ ವಿಶೇಷ ಚೇತನ ಆಟೋ ಚಾಲಕ ಶಂಕರ್ ಮೃತ ದುರ್ದೈವಿ.
ಕಳೆದ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಈಗಾಗಲೇ ತುಂಬಿದ್ದ ಬಾಗೇಪಲ್ಲಿ ತಾಲೂಕು ಪರಗೋಡು ಬಳಿಯ ಚಿತ್ರಾವತಿ ಜಲಾಶಯದ ಕೋಡಿ ಹರಿದಿದೆ. ಪರಿಣಾಮ ಚಿತ್ರಾವತಿ ನದಿ ಭೋರ್ಗೆರೆಯುತ್ತಿದ್ದು, ಆಂಧ್ರಪ್ರದೇಶಕ್ಕೆ ಯಥೇಚ್ಛವಾದ ನೀರು ಹರಿದು ಹೋಗುತ್ತಿದೆ.
ಸುಬ್ಬಾರಾಯನಪೇಟೆ ಗ್ರಾಮದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ, ಅದರಲ್ಲಿ ಆಟೋ ಮೂಲಕ ರಸ್ತೆ ದಾಟಲು ಹೋದ ಶಂಕರ್ ಆಟೋ ಸಮೇತ ಕೊಚ್ಚಿ ಹೋಗಿದ್ದಾರೆ. ಬಳಿಕ ಗಿಡಗಂಟಿಗಳ ಮಧ್ಯೆ ಶಂಕರ್ ಮೃತದೇಹ ಪತ್ತೆಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.