ಬೆಂಗಳೂರು : ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯಾದ ಒಂದು ದಿನದ ನಂತರ, ದಕ್ಷಿಣ ಕನ್ನಡದಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಹೇಯ ಕೃತ್ಯವನ್ನ ಖಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. “ಇದು ಇತರ ಪ್ರಕರಣಗಳಿಗೆ ಹೋಲಿಕೆ ಹೊಂದಿರುವ ಯೋಜಿತ ಘಟನೆಯಂತೆ ಕಾಣುತ್ತದೆ” ಎಂದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, “ಈ ಘಟನೆ ಕೇರಳದ ಗಡಿಯ ಬಳಿ ನಡೆದಿರುವುದರಿಂದ, ನಮ್ಮ ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಡಿಜಿಪಿ ಅವರು ತಮ್ಮ ಕೇರಳ ಸಹವರ್ತಿಯೊಂದಿಗೆ ಮಾತನಾಡಲಿದ್ದಾರೆ, ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಅವರೊಂದಿಗೆ ಮಾತನಾಡಿದ್ದಾರೆ” ಎಂದು ತಿಳಿಸಿದರು.
ಇನ್ನು “ಜನರ ಕೋಪವು ಸರ್ಕಾರದ ವಿರುದ್ಧವಲ್ಲ, ಈ ಘಟನೆಯ ಬಗ್ಗೆ ಜನರು ಕೋಪಗೊಳ್ಳುವುದು ನ್ಯಾಯಸಮ್ಮತವಾಗಿದೆ. ನಾನು ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ, ಗೃಹ ಸಚಿವರು ಎಸ್ಪಿಯೊಂದಿಗೆ ಮಾತನಾಡಿದ ನಂತ್ರ ಈ ಕೊಲೆಯ ಬಗ್ಗೆ ಎಲ್ಲಾ ಅಗತ್ಯ ನಿರ್ದೇಶನಗಳನ್ನ ನೀಡಿದ್ದಾರೆ. ಈ “ಹೇಯ ಕೃತ್ಯ”ದ ಹಿಂದೆ ಯಾರ ಕೈವಾಡವಿದೆಯೋ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಿಎಂ ಹೇಳಿದರು.
ಇನ್ನು “ಈ ಪ್ರದೇಶವು ಕೇರಳದ ಗಡಿಗೆ ಹತ್ತಿರದಲ್ಲಿದೆ, ಅದಕ್ಕಾಗಿಯೇ ಕೇರಳದಲ್ಲೂ ತನಿಖೆ ನಡೆಸಲಾಗುತ್ತಿದೆ. ಹಂತಕರು ಹಿಂದಿನಿಂದ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಾವು ಶೀಘ್ರದಲ್ಲೇ ಹಂತಕರನ್ನ ಬಂಧಿಸುತ್ತೇವೆ ಮತ್ತು ಕಾನೂನಿನ ಕಠಿಣ ಸೆಕ್ಷನ್ʼಗಳ ಅಡಿಯಲ್ಲಿ ಅವ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳನ್ನ ಬಿಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಇನ್ನು ಈ ಕೊಲೆಯು ಉದ್ವಿಗ್ನಗೊಳ್ಳುತ್ತಿದ್ದಂತೆ, ಕರ್ನಾಟಕ ಪೊಲೀಸರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಏತನ್ಮಧ್ಯೆ, ಗೃಹ ಸಚಿವ ಆರಗ ಜ್ಞಾನೇಂದ್ರ, “ಕೊಲೆಯ ತನಿಖೆಯು ಇದು ರಾಜಕೀಯ ಪ್ರೇರಿತವಾಗಿದೆಯೇ ಅಥವಾ ಕೊಲೆಯ ಹಿಂದೆ ಇತರ ಕಾರಣಗಳಿವೆಯೇ ಅನ್ನೋದನ್ನ ಬಹಿರಂಗಪಡಿಸುತ್ತದೆ” ಎಂದು ಹೇಳಿದರು.