ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವ್ರನ್ನ ಮೂರನೇ ಸುತ್ತಿನ ವಿಚಾರಣೆಗೆ ಕರೆದಿದೆ. ಇನ್ನು ಇಂದು, ಅವ್ರು ಎರಡನೇ ಸುತ್ತಿನ ವಿಚಾರಣೆಗಾಗಿ ಕೇಂದ್ರ ಏಜೆನ್ಸಿಯ ಮುಂದೆ ಹಾಜರಾಗಿದ್ದು, ಅವರೊಂದಿಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಇದ್ದರು.
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ವಿದ್ಯುತ್ ಲೇನ್ನಲ್ಲಿರುವ ಇಡಿ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ಗಾಂಧಿ ಜತೆ ಆಗಮಿಸಿದ್ದರು. ಇದಾದ ಬಳಿಕ ಇಡಿ ಕಚೇರಿಯಿಂದ ಅರ್ಧಕ್ಕೆ ಊಟಕ್ಕೆ ತೆರಳಿದ್ದ ಸೋನಿಯಾ ಗಾಂಧಿ, ಮಧ್ಯಾಹ್ನ 3.30ರ ಸುಮಾರಿಗೆ ವಾಪಸ್ ಬಂದಿದ್ದಾರೆ. ಇಡಿ ಕಚೇರಿಯ ಮತ್ತೊಂದು ಕೋಣೆಯಲ್ಲಿ ಪ್ರಿಯಾಂಕಾ ತಂಗಿದ್ದು, ಅವ್ರು ತನ್ನ ತಾಯಿಯನ್ನ ಭೇಟಿಯಾಗಬಹುದು ಮತ್ತು ಅಗತ್ಯವಿದ್ದರೆ ಔಷಧಗಳು ಅಥವಾ ವೈದ್ಯಕೀಯ ನೆರವು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದರು.
ಜುಲೈ 21ರಂದು ಸೋನಿಯಾ (75) ಅವರನ್ನ ಮೊದಲ ಬಾರಿಗೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಏಜೆನ್ಸಿಯ 28 ಪ್ರಶ್ನೆಗಳಿಗೆ ಉತ್ತರಿಸಿದರು ಎನ್ನಲಾಗ್ತಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಹಣಕಾಸು ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.