ಬೆಳಗಾವಿ: ಸರ್ವೋಚ್ಛ ನ್ಯಾಯಾಲಯ ಹಾಗೂ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮತ್ತಿತರ ಹಬ್ಬದಾಚರಣೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.25) ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಆಗಸ್ಟ್ 31 ರಿಂದ ಸೆಪ್ಟೆಂಬರ್ 9 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಸಂಭ್ರಮದಿಂದ ಹಾಗೂ ಶಾಂತಿಯುತವಾಗಿ ಉತ್ಸವ ಆಚರಣೆಗೆ ಗಣೇಶೋತ್ಸವ ಮಂಡಳಿಗಳು ಸಹಕರಿಸಬೇಕು ಎಂದು ಹೇಳಿದ್ದಾರೆ.
ಉತ್ಸವ ಸಂದರ್ಭದಲ್ಲಿ ಡಿಜೆ ಗೆ ಅವಕಾಶವಿಲ್ಲ; ಆದರೆ ನಿಗದಿತ ಪ್ರಮಾಣದ ಶಬ್ದ ಹೊರಸೂಸುವ “ಧ್ವನಿ”ವರ್ಧಕ ಬಳಕೆಗೆ ಸದ್ಯಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಆಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅನುಮತಿಯನ್ನು ನೀಡಲಾಗುವುದು.
ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
ಪೊಲೀಸ್, ಹೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಕಡೆ ಲಭ್ಯವಿದ್ದು, ಅಗತ್ಯ ಅನುಮತಿಯನ್ನು ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಡಿಜೆ, ಧ್ವನಿವರ್ಧಕಗಳ ಬಳಕೆ, ಪಿಓಪಿ ಮೂರ್ತಿ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರಕಾರ ಮತ್ತು ಸುಪ್ರಿಂ ಕೋರ್ಟ್ ಹಲವಾರು ಆದೇಶಗಳನ್ನು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿವೆ. ನ್ಯಾಯಾಲಯ ಹಾಗೂ ಸರಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಏನೇ ಅನುಮತಿ ನೀಡಬೇಕಿದ್ದರೂ ನ್ಯಾಯಾಲಯ ಹಾಗೂ ಸರಕಾರದ ಮಾರ್ಗಸೂಚಿ ಅನ್ವಯವೇ ಅವಕಾಶವನ್ನು ಕಲ್ಪಿಸಲು ಸಾಧ್ಯವಿರುತ್ತದೆ.
ಆದ್ದರಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಮಾರ್ಗಸೂಚಿ ಪ್ರಕಾರ ಹಬ್ಬಗಳ ಆಚರಣೆಗೆ ಅವಕಾಶ ನೀಡಲಾಗುವುದು.
ಪಿಓಪಿ ಪ್ರತಿಷ್ಠಾಪಿಸದಿರಲು ಮನವಿ:
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿಓಪಿ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಪಿಓಪಿ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡರು.
ಪಿಓಪಿ ಗಣೇಶ ಮೂರ್ತಿ ತಯಾರಕರಿಗೆ ಮುಂಚಿತವಾಗಿಯೇ ಮಾಹಿತಿಯನ್ನು ನೀಡಬೇಕಿರುವುದರಿಂದ ಬಹಳಷ್ಟು ಮುಂಚಿತವಾಗಿಯೇ ಸಭೆ ನಡೆಸಲಾಗಿದೆ ಎಂದರು.
ಗಣೇಶೋತ್ಸವ ಮಹಾಮಂಡಳಿಗಳಿಗೆ ಅನುಕೂಲ ಕಲ್ಪಿಸಲು ಹೆಸ್ಕಾಂ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತಿತರ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ರಸ್ತೆಯ ಗುಂಡಿಗಳನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉತ್ಸವ ಸಂದರ್ಭದಲ್ಲಿ ಅಗತ್ಯ ಅನುಕೂಲ ಕಲ್ಪಿಸಲು ಕ್ಯಾಂಟೋನ್ಮೆಂಟ್ ಮಂಡಳಿ, ಅರಣ್ಯ ಇಲಾಖೆಯ ಜತೆ ಸಮನ್ವಯ ಸಾಧಿಸಲು ಸಭೆ ಕರೆಯುವಂತೆ ತಿಳಿಸಿದರು.
ನಿರ್ಬಂಧವು ಗಣೇಶೋತ್ಸವಕ್ಕೆ ಸೀಮಿತವಲ್ಲ-ಸ್ಪಷ್ಟನೆ:
ಮೇ 10 ರ ನಂತರದ ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಾಲಯ ಮತ್ತು ಸರಕಾರ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯ ಆಗಿರುವುದರಿಂದ ಅವುಗಳ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾದ ನಿರ್ಬಂಧಗಳಲ್ಲ ಎಂದು ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಉಂಟಾಗುತ್ತಿರುವ ವಾಯು, ಶಬ್ದ ಹಾಗೂ ಜಲಮಾಲಿನ್ಯದ ಗಂಭೀರತೆಯನ್ನು ಪರಿಗಣಿಸಿರುವ ನ್ಯಾಯಾಲಯ ಮತ್ತು ಸರಕಾರವು ಮಾಲಿನ್ಯ ತಡೆಗಟ್ಟುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಪೊಲೀಸ್ ಠಾಣೆಯ ಮಟ್ಟದಲ್ಲಿ ಕೂಡ ಸಭೆಗಳನ್ನು ನಡೆಸಲಾಗುವುದು. ಸ್ಥಳೀಯ ಅಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಡಾ.ಬೋರಲಿಂಗಯ್ಯ ತಿಳಿಸಿದರು.
ಯಾವುದೇ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಮಂಡಳಿಗಳು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.
ನಗರದಲ್ಲಿ 378 ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ:
ಬೆಳಗಾವಿ ನಗರದಲ್ಲಿ ಒಟ್ಟಾರೆ 378 ಕ್ಕೂ ಅಧಿಕ ಮಂಡಳಿಗಳು ಗಣೇಶ ಪ್ರತಿಷ್ಠಾಪಿಸುತ್ತಿವೆ. ಕೋವಿಡ್ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಿಸಲಾಗಿದೆ.
ನಗರದ ಎಲ್ಲ ಮಂಡಳಿಗಳ ಅಧ್ಯಕ್ಷರು-ಪದಾಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ಜಿಲ್ಲಾಡಳಿತದ ಜತೆಗೆ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಾಗುವುದು ಎಂದು ವಿಕಾಸ ಕಲಘಟಗಿ ತಿಳಿಸಿದರು. ಗಣೇಶ ವಿಸರ್ಜನ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಬೇಕು ಎಂದು ಕಲಘಟಗಿ ಅವರು ಒತ್ತಾಯಿಸಿದರು. ರಸ್ತೆ ದುರಸ್ತಿ, ವಿದ್ಯುತ್ ಕಂಬಗಳ ಸ್ಥಾಪಿಸಬೇಕು; ಮೆರವಣಿಗೆಗೆ ಅಡ್ಡಿಯಾಗುವ ಆಫ್ಟಿಕಲ್ ಫೈಬರ್ ಜಾಲದ ತಂತಿಗಳ ಸ್ಥಳಾಂತರಕ್ಕೆ ಮನವಿ ಮಾಡಿಕೊಂಡರು.