ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಮುಂಜಾನೆ ಕಾಣಿಸಿಕೊಂಡ ಕಾಡ್ಗಿಚ್ಚು ಸಾವಿರ ಎಕರೆಗಳನ್ನು ಸುಟ್ಟುಹಾಕಿದೆ. ಈ ಕಾರಣದಿಂದಾಗಿ ಅಲ್ಲಿ ವಾಸಿಸುತ್ತಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಮಾರಿಪೋಸಾ ಕೌಂಟಿಯ ಮಿಡ್ಪೈನ್ಸ್ ಪಟ್ಟಣದ ಸಮೀಪವಿರುವ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶನಿವಾರದ ವೇಳೆಗೆ ಸುಮಾರು 19 ಚದರ ಮೈಲಿ (48 ಚದರ ಕಿ.ಮೀ.) ದೂರದವರೆಗೂ ಹರಡಿದೆ. ಹೀಗಾಗಿ ಅಲ್ಲಿಂದ 6,000 ಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದೆ ಎಂದು ಸಿಯೆರಾ ರಾಷ್ಟ್ರೀಯ ಅರಣ್ಯದ ವಕ್ತಾರ ಡೇನಿಯಲ್ ಪ್ಯಾಟರ್ಸನ್ ಹೇಳಿದ್ದಾರೆ.
ಬೆಂಕಿಯ ಆವರಿಸುವಿಕೆಯಿಂದಾಗಿ ಉಂಟಾಗುವ ಅಪಾಯ ತಡೆಗಾಗಿ ಗವರ್ನರ್ ಗೇವಿನ್ ನ್ಯೂಸಮ್ ಶನಿವಾರ ಮಾರಿಪೋಸಾ ಕೌಂಟಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಬೆಂಕಿ ಹಬ್ಬಲು ಪ್ರಾರಂಭವಾದ ಎರಡು ದಿನಗಳ ನಂತರ 14,200 ಎಕರೆ (5,750 ಹೆಕ್ಟೇರ್) ಗಿಂತ ಹೆಚ್ಚಿನ ಪ್ರದೇಶವನ್ನು ಆವರಿಸಿದೆ. ಭಾನುವಾರವೂ ಇದರ ಪ್ರಭಾವ ಹೆಚ್ಚಾದ ಪರಿಣಾಮ ಅಗ್ನಿಶಮಕ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ.
ಇತ್ತೀಚಿನ ವರ್ಷಗಳಲ್ಲಿ, ಕ್ಯಾಲಿಫೋರ್ನಿಯಾ ಮತ್ತು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ನ ಇತರ ಭಾಗಗಳು ಕಾಡ್ಗಿಚ್ಚಿಗೆ ಬಲಿಯಾಗಿವೆ.