ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮುಂದಿನ ವರ್ಷ ಫೆಬ್ರವರಿ 15ರಿಂದ 2022-23ರ ಶೈಕ್ಷಣಿಕ ಅಧಿವೇಶನಕ್ಕಾಗಿ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಿದೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ಪಿಟಿಐಗೆ ತಿಳಿಸಿದ್ದಾರೆ. ಆದಾಗ್ಯೂ, 2021-2022ರ ಅಧಿವೇಶನಕ್ಕಿಂತ ಭಿನ್ನವಾಗಿ 2023ರ ಶೈಕ್ಷಣಿಕ ಅಧಿವೇಶನದ ಕೊನೆಯಲ್ಲಿ ಕೇವಲ ಒಂದು ಪರೀಕ್ಷೆ ಮಾತ್ರ ಇರುತ್ತದೆ. ಅಂದ್ಹಾಗೆ, ಕೋವಿಡ್ -19ರ ಕಾರಣದಿಂದಾಗಿ, ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳನ್ನು 2022 ರಲ್ಲಿ ಎರಡು ಅವಧಿಗಳಲ್ಲಿ ನಡೆಸಲಾಯಿತು.
“ವಿಶ್ವದಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಂಡಳಿಯು ಫೆಬ್ರವರಿ 15, 2023 ರಿಂದ 2023ರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ” ಎಂದು ಭಾರದ್ವಾಜ್ ಅವರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
“ಸಿಬಿಎಸ್ಇ ವರ್ಷಕ್ಕೊಮ್ಮೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸಾಂಪ್ರದಾಯಿಕ ಅಭ್ಯಾಸಕ್ಕೆ ಮರಳಲು ನಿರ್ಧರಿಸಿದೆ. 2022ರಲ್ಲಿ, ಕೋವಿಡ್ -19 ಅನ್ನು ಗಮನದಲ್ಲಿಟ್ಟುಕೊಂಡು, ಈ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸಲಾಯಿತು” ಎಂದು ಭಾರದ್ವಾಜ್ ಹೇಳಿದರು.
ಅಂದ್ಹಾಗೆ, 10 ಮತ್ತು 12ನೇ ತರಗತಿಯ 2022ರ ಪರೀಕ್ಷೆಯ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ. ಇದೇ ಮೊದಲ ಬಾರಿಗೆ ಸಿಬಿಎಸ್ಇ 10 ಮತ್ತು 12 ನೇ ತರಗತಿ ಫಲಿತಾಂಶಗಳನ್ನು ಒಂದೇ ದಿನ ಪ್ರಕಟಿಸಿದೆ.
ಶೇ.92.7ರಷ್ಟು ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಶೇ.94.40ರಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
12 ನೇ ತರಗತಿ ಪರೀಕ್ಷೆಯಲ್ಲಿ, ಹುಡುಗಿಯರು ಹುಡುಗರನ್ನು ಮೀರಿಸಿದರು. ಬಾಲಕಿಯರ ತೇರ್ಗಡೆ ಪ್ರಮಾಣ ಶೇ.94.54ರಷ್ಟಿದ್ದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ.91.25ರಷ್ಟಿದೆ.
10ನೇ ತರಗತಿ ಪರೀಕ್ಷೆಯಲ್ಲೂ ಬಾಲಕಿಯರು ಶೇ.1.41ರಷ್ಟು ಅಂಕಗಳ ಅಂತರದಿಂದ ಬಾಲಕರನ್ನು ಹಿಂದಿಕ್ಕಿದ್ದಾರೆ. ಬಾಲಕಿಯರ ತೇರ್ಗಡೆ ಪ್ರಮಾಣ ಶೇ.95.21ರಷ್ಟಿದ್ದರೆ, ಶೇ.93.80ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.