ಶ್ರೀಲಂಕಾ : ಉತ್ತರ ಶ್ರೀಲಂಕಾದ ಮನ್ನಾರ್ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೀನುಗಾರಿಕಾ ಟ್ರಾಲರ್ ಮತ್ತು ಆರು ಮೀನುಗಾರರನ್ನು ಶ್ರೀಲಂಕಾದ ಉತ್ತರ ನೇವಲ್ ಕಮಾಂಡ್ನ ಫಾಸ್ಟ್ ಅಟ್ಯಾಕ್ ಕ್ರಾಫ್ಟ್ ಫೋರ್ಸ್ ಬಂಧಿಸಿದೆ. ಇದು ಈ ತಿಂಗಳಿನಲ್ಲಿ ನಡೆದಿರುವ 4ನೇ ಘಟನೆಯಾಗಿದೆ.
ಬಂಧಿತ ಭಾರತೀಯ ಮೀನುಗಾರರನ್ನು ಮತ್ತು ಅವರ ಟ್ರಾಲರ್ ಅನ್ನು ತಲೈಮನ್ನಾರ್ಗೆ ಕರೆ ತರಲಾಗಿದ್ದು, ಪ್ರಸ್ತುತ ಅವರನ್ನು ಮನ್ನಾರ್ನ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸುವ ವ್ಯವಸ್ಥೆ ನಡೆಯುತ್ತಿದೆ ಎಂದು ಲಂಕಾ ನೌಕಾಪಡೆಯ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀಲಂಕಾ ನೌಕಾಪಡೆಯು ಜುಲೈ 2022 ರಲ್ಲಿ ನಾಲ್ಕು ಭಾರತೀಯ ಬೇಟೆಯಾಡುವ ಟ್ರಾಲರ್ಗಳನ್ನು ಮತ್ತು 29 ಭಾರತೀಯ ಮೀನುಗಾರರನ್ನು ಕಾನೂನು ಪ್ರಕ್ರಿಯೆಗಳಿಗಾಗಿ ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ನೌಕಾಪಡೆಯು ನಿಯಮಿತವಾಗಿ ಶ್ರೀಲಂಕಾದ ನೀರಿನಲ್ಲಿ ಗಸ್ತು ಮತ್ತು ಕಾರ್ಯಾಚರಣೆಗಳನ್ನು ನಡೆಸುತ್ತದೆ. ವಿದೇಶಿ ಮೀನುಗಾರರು ದೇಶದ ನೀರಿನಲ್ಲಿ ನಡೆಸುವ ಅಕ್ರಮ ಮೀನುಗಾರಿಕೆ ಚಟುವಟಿಕೆಗಳನ್ನು ತಡೆಯುತ್ತದೆ. ತನ್ನದೇ ಆದ ಸ್ಥಳೀಯ ಮೀನುಗಾರರ ಜೀವನೋಪಾಯವನ್ನು ಮತ್ತು ದ್ವೀಪ ರಾಷ್ಟ್ರದ ಸಮುದ್ರ ಜೀವವೈವಿಧ್ಯವನ್ನು ರಕ್ಷಿಸಲು ಇದನ್ನು ಮಾಡಲಾಗುತ್ತಿದೆ ಎಂದಿದೆ.
ಬಂಧಿತ ದೋಣಿ ದಕ್ಷಿಣ ತಮಿಳುನಾಡು ರಾಜ್ಯದ ರಾಮೇಶ್ವರಂ ಪ್ರದೇಶಕ್ಕೆ ಸೇರಿದೆ. ಭಾರತೀಯ ಮೀನುಗಾರರು ತಾವು ಭಾರತೀಯ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಲಂಕಾ ನೌಕಾಪಡೆಯು ತಮ್ಮನ್ನು ಬಂಧಿಸುವ ಮೊದಲು ಭಾರತದ ಜಲಪ್ರದೇಶವನ್ನು ಅತಿಕ್ರಮಿಸಿದೆ ಎಂದು ಆರೋಪಿಸಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಆರಂಭಿಸಿದಾಗಿನಿಂದ, ಸಮಾಜದ ಕೆಳಸ್ತರದಿಂದ ಭಾರತಕ್ಕೆ ಲಂಕನ್ನರ ನಿರಂತರ ಒಳಹರಿವು ಕಂಡುಬಂದಿದೆ.
ಭಾರತವು ಬಿಕ್ಕಟ್ಟಿನ ಪೀಡಿತ ದ್ವೀಪ ರಾಷ್ಟ್ರಕ್ಕೆ ನೆರವು ಮತ್ತು ಸಹಾಯವನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಇದುವರೆಗೆ $3.8bn ಮೌಲ್ಯದ ಸಹಾಯವನ್ನು ನೀಡಿದೆ ಮತ್ತು ಬೆಂಬಲವನ್ನು ನೀಡುವುದನ್ನು ಮುಂದುವರೆಸಿದೆ.