ಹಾವೇರಿ: ದೇಶಕ್ಕೆ ಅನ್ನ ಕೊಡುವ ರೈತನಿಗೆ ಹೊಸ ಹೊಸ ಕಾರ್ಯಕ್ರಮ ಅನುಷ್ಠಾನದ ಮೂಲಕ ನಮ್ಮ ಸರ್ಕಾರ ದೇಶದಲ್ಲೇ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತಂದಿದೆ. ಈ ಕ್ಷೇತ್ರದಲ್ಲಿ ದುಡಿಯುವ ಕೃಷಿಕಾರ್ಮಿಕರಿಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಡ್ಗಳನ್ನು ವಿತರಿಸಿ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಹಿರೇಕೆರೂರು ತಾಲೂಕು ಕೋಡ ಹಾಗೂ ರಟ್ಟಿಹಳ್ಳಿಯಲ್ಲಿ ತಲಾ ರೂ.10ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗುವ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ, ಕೃಷಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ ಹಾಗೂ ಅಮೃತ ಸ್ವಸಹಾಯ ಕಿರು ಉದ್ಯಮಿ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ರೂ. ಒಂದು ಲಕ್ಷ ಮೊತ್ತದ ಚೆಕ್ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಲಾ ರೂ.10 ಲಕ್ಷ ವೆಚ್ಚದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 13 ಕೋಲ್ಡ್ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತ. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವ,ಕೋಡ, ಹಿರೇಕೆರೂರಿನಲ್ಲಿ ಕೋಲ್ಡ್ಸ್ಟೋರೇಜ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ರೈತರು ತರಕಾರಿ, ಹಣ್ಣು , ಹೂ ಹಾಗೂ ಧವಸಧಾನ್ಯಗಳನ್ನು ದಾಸ್ತಾನು ಮಾಡಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಿ ಲಾಭಗಳಿಸಲು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ ಅವರು ರೂಪಿಸಿರುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ನೆಲದ ಮಣ್ಣಿನ ಮಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ರೈತಾಪಿ ವರ್ಗ ಸೇರಿದಂತೆ ಹಲವು ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಾಗಿದೆ. ಕೃಷಿ ಕ್ಷೇತ್ರದಲ್ಲೂ ಇಡಿ ದೇಶಕ್ಕೆ ಮಾದರಿಯಾದಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಬಿ.ಸಿ.ಪಾಟೀಲ ಅವರು ಕೃಷಿ ಸಚಿವರಾದ ಮೇಲೆ ಕೃಷಿ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತಂದಿದ್ದಾರೆ. ರೈತರ ಬದುಕಿಗೆ ಹೊಸ ಆಯಾಮ ನೀಡಿದ್ದಾರೆ. ರಾಜ್ಯದ ಕೃಷಿಇಲಾಖೆಯಲ್ಲಿ ರೂಪಿಸಿರುವ ಕಾರ್ಯಕ್ರಮಗಳು ಇಡಿ ದೇಶಕ್ಕೆ ಮಾದರಿಯಾಗಿವೆ ಎಂದು ಬಣ್ಣಿಸಿದರು.
ರೈತರೊಂದಿಗೆ ಒಂದುದಿನ ಕಾರ್ಯಕ್ರಮದ ಮೂಲಕ ಇಡಿ ದಿವಸ ರೈತರೊಂದಿಗೆ ಉಳಿದು ಅವರೊಂದಿಗೆ ಸಂವಾದ ನಡೆಸಿ, ಅವರ ಬೇಕು, ಬೇಡಗಳನ್ನು ಅರಿತು ಇಲಾಖೆಯಲ್ಲಿ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ. ರೈತರು ಸಂಕಷ್ಟಕ್ಕೆ ಒಳಗಾಗಬಾರದು ಎಂದು ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡಲು ರಾಜ್ಯಾದ್ಯಂತ ಕೋಲ್ಡ್ಸ್ಟೋರೇಜ್ ನಿರ್ಮಾಣ ಯೋಜನೆಯನ್ನು ರೂಪಿಸಿದ್ದಾರೆ. ಕಳೆದ ಎರಡು ಮೂರು ವರ್ಷದಲ್ಲಿ ತಾಲೂಕಿನ ಅಭಿವೃದ್ದಿಗೆ ನೂರಾರು ಕೋಟಿ ಹಣ ತಂದಿದ್ದಾರೆ. ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ. ಕೃಷಿಯ ಜೊತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ 60 ಮಹಿಳಾ ಸಂಘಗಳಿಗೆ ತಲಾ ಒಂದು ಲಕ್ಷ ರೂ.ಸಹಾಯಧನ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಒಂದು ಹೆಣ್ಣು ಕಲಿತರೆ ಒಂದು ಶಾಲೆ ತೆರೆದಂತೆ ಎಂಬ ಮಾತು ಇದೆ. ವಿದ್ಯಾವಂತಳಾದ ಹೆಣ್ಣುಮಗಳು ಕುಟುಂಬದಲ್ಲಿ ಮಕ್ಕಳನ್ನು ಸುಸಂಸ್ಕøತವಾಗಿ ಬೆಳೆಸುತ್ತಾಳೆ. ಆರ್ಥಿಕವಾಗಿ ಸಬಲಳಾದರೆ ಕುಟುಂಬದಲ್ಲಿ ಆರ್ಥಿಕ ಶಿಸ್ತನ್ನು ತರುತ್ತಾಳೆ. ಈ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ನಮ್ಮ ಸರ್ಕಾರ ಬಲ ನೀಡುವ ಕೆಲಸಮಾಡಿದೆ. ಸ್ತ್ರೀ ಶಕ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ ಅವರು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.
ಕೃಷಿ ಇಲಾಖೆ ಮತ್ತು ಕಾರ್ಮಿಕ ಇಲಾಖೆಗೆ ಒಳ್ಳೆಯ ನಂಟು ಇದೆ. ಕಾರ್ಮಿಕ ಇಲ್ಲದೆ ಕೃಷಿಕ ಬದುಕಲಾರ, ಕೃಷಿಕ ಕೆಲಸಕೊಡದೆ ಕಾರ್ಮಿಕ ಬದುಕಲಾರ. ಇಬ್ಬರೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಕಾರಣಕ್ಕಾಗಿ ಕಾರ್ಮಿಕ ಇಲಾಖೆಯಿಂದಲೂ ಕೃಷಿ ಕಾರ್ಮಿಕರಿಗೆ ನೆರವು ನೀಡುವ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಮಾಡಲಾಗಿದೆ.ಹಿರೇಕೆರೂರು ಮತ್ತು ರಟ್ಟಿಹಳ್ಳಿಯಲ್ಲಿ ತಲಾ ರೂ.ನಾಲ್ಕು ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನ ಮಂಜೂರು ಮಾಡಲಾಗಿದೆ. ರಾಜ್ಯದ ಕೃಷಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ದೇಶದ 135 ಕೋಟಿ ಜನರಲ್ಲಿ 44.15 ಕೋಟಿ ಕಾರ್ಮಿಕರಿದ್ದಾರೆ. ರಾಜ್ಯದ ಆರು ಕೋಟಿ ಜನಸಂಖ್ಯೆಯಲ್ಲಿ 2.1ಕೋಟಿ ಕಾರ್ಮಿಕರಿದ್ದಾರೆ. ಈಪೈಕಿ ಈಗಾಗಲೇ 1.1 ಕೋಟಿ ಕಾರ್ಮಿಕರಿಗೆ ಇ-ಶ್ರಮ ಕಾರ್ಮಿಕ ಕಾರ್ಡ್ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರಂತೆಯೇ ಕೃಷಿ ಕಾರ್ಮಿಕರಿಗೂ ನೆರವು ನೀಡಲಾಗುತ್ತದೆ ಎಂದು ಹೇಳಿದರು.