ಬೆಳಗಾವಿ : ಕಳೆದ ಏಪ್ರಿಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿವಿಲ್ ವರ್ಕ್ಸ್ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರೇಣುಕಾ ಪಾಟೀಲ್ ಅವರು ತಮ್ಮ ಪತಿಯ ಸಾವಿನ ಬಗ್ಗೆ ಯಾವುದೇ ನ್ಯಾಯಸಮ್ಮತ ತನಿಖೆ ನಡೆದಿಲ್ಲ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಗೆ ಕ್ಲೀನ್ ಚಿಟ್ ಸಿಕ್ಕ ಕುರಿತು ಪ್ರತಿ ಕ್ರಿಯೆ ನೀಡಿದ ಅವರು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ಯ ಹೊರಬರಲು ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸಂತೋಷ್ ಅವರ ವಾಟ್ಸ್ಆ್ಯಪ್ ಸಂದೇಶಗಳು ಡೆತ್ ನೋಟ್ಗಳಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಅವರ ಸೆಲ್ ಫೋನ್ನಲ್ಲಿ ಸಾಕ್ಷ್ಯಾಧಾರಗಳಿವೆ. ‘ನನ್ನ ಪತಿ ಈಶ್ವರಪ್ಪ ಅವರು ತಮ್ಮ ಸಹಚರರ ಮೂಲಕ ಶೇ.40ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಸುಮಾರು 10 ಲಕ್ಷ ರೂ.ಗಳನ್ನು ಪಾವತಿಸಿದ್ದರು ಮತ್ತು ಉಳಿದ ಮೊತ್ತವನ್ನು ವ್ಯವಸ್ಥೆ ಮಾಡುತ್ತಿದ್ದರು’ ಎಂದು ರೇಣುಕಾ ತಿಳಿಸಿದ್ದಾರೆ.
ಉಡುಪಿ ಪೊಲೀಸರು ನ್ಯಾಯಯುತ ತನಿಖೆ ನಡೆಸಿಲ್ಲ ಮತ್ತು ಪ್ರಕರಣದ ಬಿ-ರಿಪೋರ್ಟ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ‘ನಾವು ಕುಟುಂಬದ ಸದಸ್ಯರು ಬಿ ರಿಪೋರ್ಟ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಸತ್ಯ ಹೊರಬರಬೇಕಾದರೆ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ನಾವು ಬಯಸುತ್ತೇವೆ’ ಎಂದು ಅವರು ಹೇಳಿದರು.