ಬೆಂಗಳೂರು : ವಿದ್ಯುಚ್ಛಕ್ತಿ ಸಂಪರ್ಕ ಕೋರಿ ಅರ್ಜಿ ಸಲ್ಲಿಸುವ ಪ್ರತಿ ಬಡವ ಕಟ್ಟುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ‘ನಿಗಮದ 53ನೇ ಸಂಸ್ಥಾಪನಾ ದಿನಾಚರಣೆ-2022’ ರ ಉದ್ಘಾಟಿಸಿ ಮಾತನಾಡಿದ ಸಿಎಂ, ಈ ವೇಳೆ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನನ್ನ ರೂಪಿಸಲು ತೀರ್ಮಾನಿಸಲಾಗಿದೆ ಎಂದರು.
ಕನಿಷ್ಠ ವಿದ್ಯುಚ್ಛಕ್ತಿಯ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು
ವಿದ್ಯುತ್ ಸರಬರಾಜು ಅಗತ್ಯ ಸೇವೆಗಳಲ್ಲಿ ಒಂದು. ಈಗಿನ ಕಾಲದಲ್ಲಿ ವಿದ್ಯುತ್ ಇಲ್ಲದೇ ಯಾರೂ ಬದುಕುವುದು ಸಾಧ್ಯವಿಲ್ಲ. ಕುಡಿಯುವ ನೀರು ಕೊಟ್ಟಂತೆಯೇ ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿ. ಜನರು ದೈನಂದಿನ ಬದುಕಿಗೆ ಅಗತ್ಯವಾಗಿ ಬೇಕಾದ ಕನಿಷ್ಟ ವಿದ್ಯುತ್ಛಕ್ತಿಯಿಂದ ವಂಚಿತರಾಗಬಾರದೆಂಬುದು ಸರ್ಕಾರದ ಮಾನವೀಯ ಕಳಕಳಿ. ವಿದ್ಯುತ್ ಪೂರೈಕೆ ಎನ್ನುವುದು ಅಗತ್ಯ ಸೇವೆಗಳಲ್ಲೊಂದಾಗಿದ್ದು, ಅದು ಜನರ ಹಕ್ಕಾಗಿದೆ. ಕಾರ್ಖಾನೆಗಳಿಗೆ ಅವಶ್ಯವಾಗಿ ಸರಬರಾಜಾಗುವಂತೆ ಜನರಿಗೂ ವಿದ್ಯುತ್ ಸೌಲಭ್ಯ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸೂಕ್ತ ಆದೇಶವನ್ನು ಹೊರಡಿಸಲು ಸೂಚಿಸಲಾಗಿದೆ. ಕಾನೂನುಗಳು ಜನರ ಸುಗಮ ಜೀವನಕ್ಕೆ ಅನುವಾಗುವಂತೆ ಇರಬೇಕು. ರಾಜ್ಯದ.ವೈಜ್ಞಾನಿಕ ಚಿಂತನೆಯಿಂದ ವಿದ್ಯುತ್ ಉತ್ಪಾದನೆ ಹಾಗೂ ನಿರ್ವಹಣೆಯನ್ನು ಮಾಡಬೇಕು ಎಂದರು.
ದೇಶದ ಶೇ.43 ರಷ್ಟು ಸೌರಶಕ್ತಿ ಕರ್ನಾಟಕದಲ್ಲಿ ಉತ್ಪಾದನೆ
ಕರ್ನಾಟಕ ವಿದ್ಯುತ್ ನಿಗಮ ಕರ್ನಾಟಕದ ಬೆಳಕು. 70 ರ ದಶಕಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಂಡು ರಾಜ್ಯದ ವಿದ್ಯುತ್ ವಲಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿದ್ಯುತ್ ಉತ್ಪಾದನೆಯಲ್ಲಿ ಪ್ರಾಕೃತಿಕ ಹಾಗೂ ಕಾಮಗಾರಿಯಲ್ಲಿನ ಸವಾಲುಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸುವ ಇಂಜಿನಿಯರ್ಗಳು, ಕಾರ್ಮಿಕರನ್ನು ಇಂದು ನೆನೆಯಲೇಬೇಕು. ಸವಾಲುಗಳನ್ನು ಎದುರಿಸಿ ವಿದ್ಯುತ್ ಯೋಜನೆಗಳನ್ನು ಸಾಕಾರಗೊಳಿಸುವ ಎಲ್ಲ ಇಂಜಿನಿಯರ್ಗಳನ್ನು ಅಭಿನಂದಿಸುತ್ತೇನೆ. ಥರ್ಮಲ್ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. 30 ಸಾವಿರ ವಾಟ್ ವಿದ್ಯುತ್ ಉತ್ಪಾದನೆ ರಾಜ್ಯದಲ್ಲಾಗುತ್ತಿದೆ. ದೇಶದ ಶೇ.43 ರಷ್ಟು ಸೌರಶಕ್ತಿ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನವೀಕರಿಸಬಹುದಾದ ಇಂಧನ, ಸೌರಶಕ್ತಿ, ಜಲವಿದ್ಯುತ್ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ ಎಂದರು.
ವಿದ್ಯುತ್ ಸಂಗ್ರಹಣಾ ಘಟಕಗಳ ಸ್ಥಾಪನೆಗೆ ನೀತಿ
ಶರಾವತಿಯಲ್ಲಿ ವಿದ್ಯುತ್ ಸಂಗ್ರಹಣಾ ಘಟಕಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಖಾಸಗಿ ವಲಯದವರೂ ವಿದ್ಯುತ್ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ನೀತಿಯನ್ನು ರೂಪಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಇಲ್ಲಿ ಬಳಸಲಾಗುತ್ತದೆ. ಹೈಡ್ರೋಜನ್ ಇಂಧನ ಉತ್ಪಾದನೆ, ಸಮುದ್ರದ ನೀರಿನಿಂದ ಅಮೋನಿಯಾ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು.
ಹೊಸ ತಂತ್ರಜ್ಞಾನ ಬಳಕೆಗೆ ಸರ್ಕಾರ ಸದಾ ಸಿದ್ಧ
ಜಾಗತಿಕ ಇಂಧನ ವಲಯದಲ್ಲಿ ಇರುವ ಹೊಸತನ ಕರ್ನಟಕದಲ್ಲಿಯೂ ಬರಬೇಕು ಎಂಬ ಆಶಯ ನಮ್ಮದು. ಹೊಸ ತಂತ್ರಜ್ಞಾನ ಬಳಕೆ ಮಾಡಲು ನಮ್ಮ ಸರ್ಕಾರ ಸದಾ ಸಿದ್ಧವಿದೆ. ಪ್ರಸರಣ ಮತ್ತು ವಿತರಣೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದೇವೆ. ಬರುವ ದಿನಗಳಲ್ಲಿ ಪ್ರಸರಣ ಮತ್ತು ವಿತರಣಾ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಸಹಾಯಧನಗಳಿಂದಾಗಿ ಎಸ್ಕಾಂಗಳ ಸ್ಥಿತಿ ಉತ್ತಮವಾಗಿಲ್ಲ. ಅವರಿಗೆ ಹಣಕಾಸಿನ ನೆರವಿನ ಅಗತ್ಯ ಮತ್ತು ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಕಳೆದ ವರ್ಷ 5 ಸಾವಿರ ಕೋಟಿ ರೂ.ಗಳನ್ನು ಕರ್ನಾಟಕ ವಿದ್ಯುತ್ ನಿಮಗಕ್ಕೆ ಎಸ್ಕಾಂಗಳ ಮೂಲಕ ಒದಗಿಸಿದೆ. ಎಸ್ಕಾಂ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಕೋಟಿ ರೂ.ಗಳ ಸಾಲವನ್ನು ಇಪಿಪಿ ಆಗಿ ಪರಿವರ್ತಿಸಲಾಗಿದೆ. ವಿದ್ಯುತ್ ವಲಯದಲ್ಲ ದಿಟ್ಟ ನಿರ್ಣಯಗಳನ್ನು ತುರ್ತು ಸ್ಪಂದನೆಯ ಮೂಲಕ ಸರ್ಕಾರ ತೆಗೆದುಕೊಂಡಿದೆ. ಬಳಕೆದಾರರ ವಿಚಾರದಲ್ಲಿ ಬಹಳಷ್ಟು ವಿನಾಯತಿಯನ್ನು ನೀಡಿದ್ದೇವೆ. 2008 ರಿಂದ ರೈತರಿಗೆ 10 ಹೆಚ್.ಪಿ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ವಿದ್ಯುತ್ ಸಂಸ್ಥೆಗಳಿಗೆ ಆರ್ಥಿಕ ಬಲ
ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಬರುವ ಯೋಜನೆ ಮಾಹೆ ಜಾರಿಯಾಗುತ್ತಿದೆ. ಕಾಫಿ ಬೆಳೆಗಾರರಿಗೂ 10 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಸರ್ಕಾರ 14 ಸಾವಿರ ಕೋಟಿ ರೂ.ಗಳ ಸಹಾಯಧನ ನೀಡುವ ಸ್ಥಿತಿಗೆ ಬಂದಿದ್ದೇವೆ. ಆದಷ್ಟೂ ವಿವಿಧ ಸುಧಾರಣೆಗಳನ್ನು ತಂದು, ವಿವಿಧ ಕ್ರಮಗಳನ್ನು ತೆಗೆದುಕೊಂಡು ಪುನರ್ ರಚನೆ ಮಾಡಲು ಗುಲ್ಚರಣ್ ಅವರ ಸಮಿತಿ ರಚಿಸಲಾಗಿತ್ತು. ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಎಸ್ಕಾಂ, ಕೆ.ಪಿ.ಟಿ.ಸಿಎಲ್, ಕೆಪಿಸಿಗಳಿಗೆ ಆರ್ಥಿಕ ಬಲವನ್ನು ತುಂಬಲು ಪ್ರತ್ನಿಸಲಾಗಿದೆ. ಒಟ್ಟು ಆರ್ಥಿಕ ಸ್ಥಿತಿಯಲ್ಲಿ ಅತಿ ಹೆಚ್ಚು ಸಹಾಯಧನ ನೀಡುವುದು ವಿದ್ಯುತ್ ವಲಯದಲ್ಲಿ ಹಾಗೂ ಆಹಾರ ವಲಯದಲ್ಲಿ. ಸಾರಿಗೆ ವಲಯದಲ್ಲಿಯೂ ಸರ್ಕಾರದ ಅನುದಾನ ಬಹಳಷ್ಟು ವ್ಯಯವಾಗುತ್ತದೆ. ಆ ವಲಯವನ್ನೂ ಸುಧಾರಣೆ ಮಾಡಲು ರಚಿಸಿದ ಸಮಿತಿ ವರದಿ ನೀಡಿದೆ. ಎರಡನ್ನೂ ಮುಂದಿನ ಸಚಿವ ಸಂಪುಟ ಸಭೆಯನ್ನು ಚರ್ಚೆಗೆ ತರಲಾಗುವುದು. ಸಮಸ್ಯೆಗಳನ್ನು ಎದುರಿಸಿ, ಮುಂದಕ್ಕೆ ಹಾಕದೇ ಅದರ ಅಧ್ಯಯನ ಮಾಡಿ ಪರಿಹಾರ ನೀಡುವ ಸಕಾರಾತ್ಮಕ ಸರ್ಕಾರ ನಮ್ಮದು. ಆಗ್ಗಾಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಂಡಿದ್ದರೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಸಹಾಯಧನದ ಮೊತ್ತವನ್ನು ಉಳಿತಾಯ ಮಾಡಿದರೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಭವಿಷ್ಯದಲ್ಲಿ ಈ ಎಲ್ಲಾ ಸಂಸ್ಥೆಗಳು ತನ್ನ ಶಕ್ತಿಯ ಮೇಲೆ ನಡೆಯಬೇಕೆಂಬ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದರು.