ನವದೆಹಲಿ: ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಣವು ಸೋಮವಾರ ಪಕ್ಷದ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದೆ ಮತ್ತು ಇದೇ ವೇಳೆ ಈ ಹಿಂದೆ ಅಸ್ತಿತ್ವದಲ್ಲಿದ್ದ ಹಳೆಯ ಸಮಿತಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಶಿಂಧೆ ಅವರನ್ನು ಶಿವಸೇನೆಯ ಮುಖ್ಯ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಶಾಸಕ ದೀಪಕ್ ಕೇಸರ್ಕರ್ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದ್ದು, ರಾಮದಾಸ್ ಕದಂ ಮತ್ತು ಆನಂದರಾವ್ ಅದ್ಸುಲ್ ಅವರನ್ನು ಶಿವಸೇನೆಯ ನಾಯಕರಾಗಿ ನೇಮಿಸಲಾಗಿದೆ.
ರಾಮದಾಸ್ ಕದಂ ಮತ್ತು ಆನಂದರಾವ್ ಅದ್ಸುಲ್ ಅವರನ್ನು ಕೆಲವು ಸಮಯದ ಹಿಂದೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಶಿವಸೇನೆಯಿಂದ ಉಚ್ಚಾಟಿಸಲಾಗಿತ್ತು. ಆಗ ಶಿವಸೇನಾ ಪಕ್ಷದ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ ಅವರ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಇದಾದ ಕೂಡಲೇ ಶಿಂಧೆ ಗುಂಪು ಅವರಿಬ್ಬರಿಗೂ ನಾಯಕನ ಸ್ಥಾನವನ್ನು ನೀಡಿದೆ.