ಬೆಂಗಳೂರು: ರಾಜ್ಯದಲ್ಲಿ ಶುಚಿತ್ವ ಕಾಯಕದಲ್ಲಿ ತೊಡಗಿರುವಂತ 9000 ವಿವಿಧ ಬಗೆಯ ನೌಕರರನ್ನು ಮುಂದಿನ ದಿನಗಳಲ್ಲಿ ಖಾಯಂ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಪೌರ- ಕಾರ್ಮಿಕರ ದಿನಾಚರಣೆ ಅಂಗವಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು 12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಖಾಯಂ ನೇಮಕಾತಿ ಪತ್ರ ವಿತರಣೆ ಮಾಡಿದರು.
ಈ ಬಳಿಕ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಪೌರಕಾರ್ಮಿಕರು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9000 ಸಂಖ್ಯೆಯಷ್ಟಿರಬಹುದಾದ ವಾಹನಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನೂ ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಖಾಯಂ ನೇಮಕಾತಿಯನ್ನು ಬೆಂಬಲಿಸಿ, ಆಗಿನ ಸರ್ಕಾರ ಖಾಯಂ ನೇಮಕಾತಿ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪೌರ ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ಇದರಿಂದ 4ನೇ ದರ್ಜೆಯ ಪೌರಕಾರ್ಮಿಕನ ವೇತನ , ಅವರ ಖಾತೆಗೆ ನೇರವಾಗಿ 39000 ರೂ.ಗಳು ಪಾವತಿಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
1000 ಪೌರಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು , ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು, ತನ್ಮೂಲಕ ಸಮಸಮಾಜವನ್ನು ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ದೊರೆಯುವಂತಾಗಬೇಕು. ಪೌರಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು.