ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಅಂಗಾಂಗವನ್ನು ಅರಣ್ಯಾಧಿಕಾರಿಗಳು, ಪೊಲೀಸರಿಗೆ ಒಪ್ಪಿಸಲು 90 ದಿನ ಕಾಲಾವಕಾಶ ನೀಡಲಾಗಿದ್ದು, ಈ ಕುರಿತಂತೆ ಸರ್ಕಾರದಿಂದ ಅಧಿಸೂಚನೆ ಹೊರಾಡಿಸಲಾಗಿದೆ.
ಅನಧಿಕೃತವಾಗಿ ಸಂಗ್ರಹಿಸಿಡಲಾದ ವನ್ಯಜೀವಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಮೂರು ತಿಂಗಳ ಕಾಲಾವಕಾಶ ನೀಡಿ ಅರಣ್ಯ ಇಲಾಖೆ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನಿಗದಿತ ಅವಧಿಯ ನಂತರವೂ ವನ್ಯಜೀವಿ ಅಂಗಾಂಗಗಳನ್ನು ಸಂಗ್ರಹಿಸಿಡುವವರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ವನ್ಯಜೀವಿ ಅಂಗಾಂಗಗಳನ್ನು ಹೊಂದಿರುವವರು ಅರಣ್ಯ ಇಲಾಖೆಗೆ ಅದನ್ನು ಒಪ್ಪಿಸುವುದಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಿ, ವನ್ಯಜೀವಿ ಅಂಗಾಂಗಗಳನ್ನು ಹಿಂದುರಿಗಿಸುವ ಕುರಿತು ನಿಯಮಗಳನ್ನು ತಿಳಿಸಲಾಗಿದೆ. ಅದರಂತೆ ವನ್ಯಜೀವಿ ಅಘೋಷಿತ ವನ್ಯಜೀವಿಗಳ ರಕ್ಷಣೆ ಮತ್ತು ಶರಣಾಗತಿ ಅಥವಾ ಪ್ರಾಣಿಗಳ ಟ್ರೋಫಿ (ಕರ್ನಾಟಕ) ನಿಯಮ 2024ರ ಅಡಿಯಲ್ಲಿ ವನ್ಯಜೀವಿಗಳ ಅಂಗಾಂಗವನ್ನು ಅರಣ್ಯ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಅಧಿಸೂಚನೆ ಪ್ರಕಟಿಸಿದ ಅಂದರೆ ಜ.11ರಿಂದ ಮುಂದಿನ 90 ದಿನಗಳ ಒಳಗಾಗಿ ಅನಧಿಕೃತವಾಗಿ ಸಂಗ್ರಹಿಸಿಡಲಾದ ವನ್ಯಜೀವಿ ಅಂಗಾಂಗಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ವನ್ಯಜೀವಿ ಅಂಗಾಂಗಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ರೇಂಜ್ ಅರಣ್ಯಾಧಿಕಾರಿ ಅಥವಾ ಸ್ಥಳೀಯ ಪೊಲೀಸ್ ಠಾಣೆ ಮೂಲಕ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕಿದೆ.